ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ರಾಜ್ಯದಲ್ಲಿ ಕಟ್ಟೆಚ್ಚರ

ಬೆಂಗಳೂರು,ಸೆ.೨೬- ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ನಾಳೆ ಭಾರತ್ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ ಯಶಸ್ವಿಗೊಳಿಸಲು ಮುಂದಾಗಿದೆ.
ಆದರೆ, ಬಹುತೇಕ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ಘೋಷಿಸಿರುವುದರಿಂದ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ.
ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ನೇತೃತ್ವದಲ್ಲಿ ನಾಳೆ ಕೆಆರ್ ಪುರಂನಿಂದ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ. ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ಹಲವು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ರಾಜ್ಯದಲ್ಲೂ ಬಂದ್ ಬಿಸಿ ತಟ್ಟುವ ಸಾಧ್ಯತೆ ಇದ್ದು, ಮುನ್ನೆಚ್ಚೆರಿಕೆ ಕ್ರಮವಾಗಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.
ಬಂದ್‌ನಿಂದಾಗಿ ಸಾರ್ವಜನಿಕ ಸಾರಿಗೆ, ಖಾಸಗಿ ಸಾರಿಗೆ, ಅಂಗಡಿ ಮುಂಗಟ್ಟುಗಳು, ವಾಣಿಜ್ಯ ವಹಿವಾಟುಗಳು ಸ್ಥಗಿತಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ ಜನಜೀವನದ ಮೇಲೆ ಪರಿಣಾಮ ಬೀರಲಿದೆ.
ನಾಳೆ ಭಾರತ್ ಬಂದ್‌ಗೆ ನೀಡಿರುವ ಕರೆಗೆ ದೇಶದಾದ್ಯಂತ ನೂರಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕೇಂದ್ರಸರ್ಕಾರದ ನೀತಿಗಳನ್ನು ವಿರೋಧಿಸಿ ನಡೆಯುತ್ತಿರುವ ಈ ಪ್ರತಿಭಟನೆಗೆ ಹಲವು ಸಂಘಟನೆಗಳ ಬೆಂಬಲವನ್ನು ನಿರಾಕರಿಸಿವೆಯಾದರೂ ಭಾರತ್ ಬಂದ್ ದಿನವಾದ ನಾಳೆ ಮೆಟ್ರೊ, ಆಟೋ, ಟ್ಯಾಕ್ಸಿ, ಕ್ಯಾಬ್, ಹೋಟೆಲ್, ಬೀದಿ ಬದಿ ವ್ಯಾಪಾರ, ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲಿವೆ.
ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘ, ರಾಜ್ಯ ಹಸಿರು ಸೇನೆ. ಪ್ರಾಂತ ರೈತ ಕಾರ್ಮಿಕ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಆಟೋ ಮಾಲೀಕರು, ಕ್ಯಾಬ್ ಚಾಲಕರ ಸಂಘ, ಬ್ಯಾಂಕ್ ಒಕ್ಕೂಟ ನೈತಿಕ ಬೆಂಬಲ ವ್ಯಕ್ತಪಡಿಸಿವೆ.
ರಾಜ್ಯಾದ್ಯಂತ ಬಂದ್ ಬೆಂಬಲಿಸಲು ಹಾಗೂ ಯಶಸ್ವಿಗೊಳಿಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಮೈಸೂರಿನಲ್ಲೂ ಬಂದ್ ಯಶಸ್ವಿಗೆ ರೈತ ಸಂಘಟನೆಗಳು ಮುಂದಾಗಿದ್ದು, ನಾಗರಿಕರು ಬಂದ್ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಬಂದ್ ಯಶಸ್ವಿಗೊಳಿಸಲು ರೈತ ಸಂಘಟನೆಗಳು ಈಗಾಗಲೇ ಹಲವು ರೀತಿಯ ಮೆರವಣಿಗೆ, ಜಾಥಾಗಳನ್ನು ನಡೆಸಿನಾಗರಿಕರು ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ನಾಳಿನ ಬಂದ್‌ಗೆ ಕೆಲ ಸಂಘಟನೆಗಳ ಬೆಂಬಲ ವ್ಯಕ್ತವಾದರೆ, ಮತ್ತೆ ಕೆಲ ಸಂಘಟನೆಗಳ ಬೆಂಬಲ ನಿರಾಕರಣೆಯಿಂದ ಬಂದ್ ನಾಗರಿಕರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವುದು ಕುತೂಹಲಕ್ಕೆಡೆಮಾಡಿದೆ.

ಬಂದ್ ಅವಶ್ಯಕತೆ ಇಲ್ಲ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸಂಕಷ್ಟದಲ್ಲಿರುವ ಈ ವೇಳೆಯಲ್ಲಿ ಬಂದ್ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
ಇಡೀ ದೇಶ ಈಗಷ್ಟೇ ಕೋವಿಡ್‌ನಿಂದ ಹೊರ ಬಂದಿದೆ. ಕಳೆದ ಒಂದೂವರೆ ವರ್ಷದಿಂದ ಎಲ್ಲ ಕ್ಷೇತ್ರಗಳ ಕಾ
ರ್ಯಚಟುವಟಿಕೆಗಳು ಕುಂಟಿತಗೊಂಡಿದ್ದವು. ಸೋಂಕು ಇಳಿಮುಖವಾಗಿ ಈಗಷ್ಟೇ ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣುತ್ತಿವೆ. ಹೀಗಿರುವಾಗ ಭಾರತ್ ಬಂದ್ ನಡೆಸುವುದು ಸರಿಯಲ್ಲ.
ರೈತ ಸಂಘಟನೆಗಳು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಈಗ ಬಂದ್ ನಡೆಸಿದರೆ ಅದರಿಂದ ರೈತರಿಗೆ, ಜನಸಾಮಾನ್ಯರಿಗೆ ಎಲ್ಲರಿಗೂ ತೊಂದರೆಯಾಗುತ್ತದೆ. ಹಾಗಾಗಿ ರೈತ ಸಂಘಟನೆಗಳು ಬಂದ್‌ನ್ನು ಕೈಬಿಟ್ಟು ಸಹಕರಿಸಬೇಕು ಎಂದರು.

ಬಸ್ ಸಂಚಾರ ವ್ಯತ್ಯಯವಿಲ್ಲ
ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿರುವ ಬೆನ್ನಲ್ಲೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ. ಎಂದಿನಂತೆ ಬಸ್ ಸಂಚಾರ ಇರಲಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಬೇಡಿಕೆಗಳಿಗೆ ಅನುಸಾರವಾಗಿ ಬಸ್ ಸಂಚಾರ ಮುಂದುವರೆಯಲಿದೆ. ಭಾರತ್ ಬಂದ್‌ಗೆ ಕರೆ ನೀಡಿದ್ದರೂ ಸಾರ್ವಜನಿಕರಿಗೆ ಬಸ್‌ನ ಸೇವೆಯಲ್ಲಿ ಕೊರತೆ ಉಂಟಾಗುವುದಿಲ್ಲ. ಬೇಡಿಕೆಗೆ ಅನುಗುಣವಾಗಿ ಬಸ್ ಸಂಚರಿಸಲಿದೆ ಎಂದು ಕಳಸದ್ ತಿಳಿಸಿದ್ದಾರೆ.
ರೈತರು ನಾಳೆ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಆಸ್ತಿ-ಪಾಸ್ತಿಗಳಿಗೆ ಹಾನಿಯಾಗದಂತೆ ಹಾಗೂ ಕಿಡಿಗೇಡಿಗಳಿಂದ ದುಷ್ಕೃತ್ಯಗಳು ನಡೆಯದಂತೆ ನಿಗಾ ವಹಿಸಲಾಗುತ್ತದೆ.
ಈಗಾಗಲೇ ಶೇ. ೮೦ ರಷ್ಟು ಬಸ್‌ಗಳು ನಡೆಸುತ್ತಿವೆ. ಮುಂಗಡ ಟಿಕೆಟ್ ಕಾಯ್ದಿರಿಸಲು ಎಂದಿನಂತೆ ಆನ್‌ಲೈನ್ ಸೇವೆ ಇರಲಿದೆ. ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಅಡಚಣೆ ಇಲ್ಲದೆ ಪ್ರಯಾಣಿಸಬಹುದೆಂದು ತಿಳಿಸಿದ್ದಾರೆ.