ಕೃಷಿ ಕಾಯ್ದೆ ವಿರೋಧಿಸಿ ಆರ್.ಕೆ.ಎಸ್. ಕರಾಳ ದಿನಾಚರಣೆ

ಬಳ್ಳಾರಿ, ಮೇ.26: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ‘ಮೇ 26 – ಕರಾಳ ದಿನ’ ವನ್ನು ದೇಶದಾದ್ಯಂತ ಯಶಸ್ವಿಗೊಳಿಸಲು-ಇಂದು ಬಳ್ಳಾರಿ ಜಿಲ್ಲೆಯಾದ್ಯಂತ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರೂ ಸೇರಿದಂತೆ ಎಲ್ಲಾ ಜನರು ಹೋರಾಟನಿರತ ರೈತರ ಪರವಾಗಿ ತಮ್ಮ ಮನೆಗಳಲ್ಲಿ ಕಪ್ಪು ಬಾವುಟ ಹಾಕಿ ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಿರಿ ಎಂಬ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟಿಸಲಾಯಿತು. ಈ ಆನ್ಲೈನ್ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಎಐಕೆಕೆಎಂಎಸ್‍ನ(ಆರ್.ಕೆ.ಎಸ್) ಜಿಲ್ಲಾ ಅಧ್ಯಕ್ಷರಾದ ಈ.ಹನುಮಂತಪ್ಪ ಮತ್ತು ಜಿಲ್ಲಾ ಮುಖಂಡರಾದ ಗೋವಿಂದ್ ಕರಾಳ ದಿನದ ಹಿನ್ನಲೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹರಿಯಾಣ-ದೆಹಲಿ ಗಡಿಭಾಗದಲ್ಲಿ ಕುಳಿತಿರುವ ಸಾವಿರಾರು ರೈತರು 2021ರ ಮೇ 26ರಂದು 6 ತಿಂಗಳನ್ನು ಪೂರೈಸಿದರೆ, ಬಿಜೆಪಿ ಮೋದಿ ಸರ್ಕಾರದ ಕರಾಳ ಆಡಳಿತವು ಆ ದಿನಕ್ಕೆ 7 ವರ್ಷಗಳನ್ನು ಪೂರೈಸುತ್ತದೆ.
ಬಿಜೆಪಿಯ ಮೋದಿ ಸರ್ಕಾರ ಮಾಡಿದ ಕೃಷಿ ಕಾಯ್ದೆಗಳು ರೈತರನ್ನು ದುರ್ಗತಿಗೆ ತಳ್ಳುತ್ತವೆ. ಆದರೆ ರೈತರನ್ನು ನಾಶ ಮಾಡಿ, ಕೇವಲ ಕಾರ್ಪೊರೆಟ್ ಮನೆತನಗಳ ಬೊಕ್ಕಸವನ್ನು ತುಂಬಿಸುವುದೇ ಮೋದಿ ಸರ್ಕಾರದ ಉದ್ದೇಶ.
ಈ ಕರಾಳ ಕಾಯ್ದೆಗಳು ರೈತರನ್ನಷ್ಟೇ ಅಲ್ಲದೆ, ನಗರದ ಬಡವರು ಮತ್ತು ಗ್ರಾಮೀಣ ಭಾಗದ ಭೂರಹಿತ ಬಡವರು, ಕೃಷಿ ಕಾರ್ಮಿಕರು ಮತ್ತು ಕುಶಲಕರ್ಮಿಗಳೂ ಸಹ ನಾಶ ಮಾಡುತ್ತದೆ. ಧಾನ್ಯಗಳು, ಕಾಳುಗಳು, ಮುಂತಾದ ಆಹಾರ ಪದಾರ್ಥಗಳನ್ನು ಅಂಬಾನಿ-ಅದಾನಿಗಳಂತಹ ದೊಡ್ಡ ಬಂಡವಾಳಶಾಹಿಗಳಿಗೆ ದಾಸ್ತಾನು ಮಾಡಲು ವಿನಾಯಿತಿಯನ್ನು ಕೊಟ್ಟಿರುವುದರಿಂದ, ಅವುಗಳು ವಿಪರೀತ ದುಬಾರಿಯಾಗುವುದನ್ನು ನೋಡುತ್ತೇವೆ ಎಂದಿದ್ದಾರೆ ಎಂದು ಆರ್.ಕೆ.ಎಸ್ ನ ಗೋವಿಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.