ಕೃಷಿ ಕಾಯ್ದೆ ವಾಪಸ್ ಪಡೆಯುವುದು ಅನಿವಾರ್ಯ- ರಾಹುಲ್

ಮದುರೈ, ಜ 14- ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದು ಕೇಂದ್ರ ಸರ್ಕಾರಕ್ಜೆ ಅನಿವಾರ್ಯ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ಅವನಿಯಪುರಂನಲ್ಲಿ ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೀವ್ರ ವಿವಾದಕ್ಕೆ ಕಾರಣವಾಗಿರುವ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಲೇಬೇಕಾಗುತ್ತದೆ.‌ಇದು ಅನಿವಾರ್ಯವಾಗಲಿದ್ದು ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ತಿಳಿಸಿದರು.
ಕೆಲವು ಉದ್ಯಮಿಗಳ ಹಿತಕ್ಕಾಗಿ ರೈತರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕೊರೊನಾ ಸಾಂ
ಕ್ರಾಮಿಕ ರೋಗ ಬಂದಾಗ ಜನರಿಗೆ ನೆರವು ನೀಡಿಲ್ಲ. ನೀವು ಯಾರ ಪ್ರಧಾನಿ ಎಂದು ಪ್ರಶ್ನಿಸಿದರು.
ನೀವು ಭಾರತದ ಪ್ರಧಾನ ಮಂತ್ರಿಯೇ ಅಥವಾ ಆಯ್ದ ಎರಡು ಮೂರು ಉದ್ಯಮಿಗಳ ಪ್ರಧಾನ ಮಂತ್ರಿಯೇ ಎಂದು ಮೋದಿ ವಿರುದ್ಧ ಕಿಡಿಕಾರಿದರು.
ಭಾರತದ ಗಡಿಯನ್ನು ಚೀನಾ ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಚೀನಾದ ಜನರು ದೇಶದ ಗಡಿಯೊಳಕ್ಕೆ ಏಕೆ ಕುಳಿತಿದ್ದಾರೆ. ನರೇಂದ್ರ ಮೋದಿಯವರಿಗೆ ಏನನ್ನೂ ಏಕೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.