ಕೃಷಿ ಕಾಯ್ದೆ ವಾಪಸ್ಸಿಗೆ ಕೇಂದ್ರ ಸಂಪುಟ ಅಸ್ತು

ನವದೆಹಲಿ,ನ.೨೪- ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಇಂದು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಗುರುನಾನಕ್ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಹೋರಾಟಕ್ಕೆ ಮಣಿದು ಹಾಗೂ ಉತ್ತರ ಪ್ರದೇಶ ಸೇರಿದಂತೆ ೫ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದರು.
ನಾವು ಏನೇ ಮಾಡಿದರೂ ರೈತರಿಗಾಗಿ ಮಾಡಿದ್ದೇವೆ. ನಾವು ಮಾಡುತ್ತಿರುವುದು ದೇಶಕ್ಕಾಗಿ, ಈ ತಿಂಗಳಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದರು. ಅದರಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ನ. ೨೯ ರಿಂದ ಡಿ. ೨೩ರವರೆಗೆ ಚಳಿಗಾಲದ ಸಂಸತ್ ಅಧಿವೇಶನ ನಡೆಯಲಿದೆ.
ಆದರೆ, ರೈತ ನಾಯಕರು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಸಂಬಂಧ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೂ ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ.
ಇತ್ತೀಚಿಗೆ ಲಖನೌದಲ್ಲಿ ನಡೆದ ರೈತ ಪಂಚಾಯತ್ ಸಭೆಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಸಮರ್ಪಕ ಕಾನೂನು ರೂಪಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.