ಕೃಷಿ ಕಾಯ್ದೆ ರದ್ದು ಸಂಸತ್ ಒಪ್ಪಿಗೆ ನೀಡುವವರೆಗೂ ಹೋರಾಟ

ನವದೆಹಲಿ, ನ.೧೯- ಸಂಸತ್ತಿನಲ್ಲಿ ಅಂಗೀಕಾರ ಮಾಡಿರುವ ಕೃಷಿ ಕಾಯ್ದೆಯನ್ನು ಸಂಸತ್ ನಲ್ಲಿ ಸಂಪೂರ್ಣವಾಗಿ ರದ್ದು ಮಾಡುವ ತನಕ ಹೋರಾಟ ಹಿಂಪಡೆಯುವುದಿಲ್ಲ ಎಂದು ಭಾರತೀಯ ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಮಾಡುವ ತನಕ ನಮ್ಮ ಹೋರಾಟ ಮುಂದುವರಿ
ಯಲಿದೆ ಎಂದು ಅವರು ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರಕಾರ ರೈತರ ನಾಯಕರೊಂದಿಗೆ ಮಾತನಾಡಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕುರಿತು ಪ್ರಧಾನಿ ಯಾವುದೇ ವಿಷಯವನ್ನು ಪ್ರಸ್ತಾಪ ಮಾಡಿದ ಹೋರಾಟ ಇನ್ನು ಮುಂದೆ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕೇಂದ್ರ ಸರ್ಕಾರ ಖಚಿತವಾಗಿ ವಿಷಯ ಪ್ರಕಟಿಸದಿದ್ದರೆ ಮುಂಬರುವ ದಿನಗಳಲ್ಲಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ
ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತಿಭಟನೆ ನಿರತ ರೈತರು ೮೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಅವರಿಗೆ ಕನಿಷ್ಠ ಸಾಂತ್ವನವನ್ನು ಹೇಳದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಯ ದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದು ರೈತರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಸಂಸತ್ನಲ್ಲಿ ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.