ಕೃಷಿ ಕಾಯ್ದೆಗಳ ಹಿಂಪಡೆದ ಸರ್ಕಾರ; ರೈತರಿಂದ ವಿಜಯೋತ್ಸವ

ದಾವಣಗೆರೆ.ನ.೨೦: ರೈತರಿಗೆ ಮಾರಕವಾಗಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಸಮಿತಿ ವಿಜಯೋತ್ಸವ ಆಚರಿಸಿತು.ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ವಿವಿಧ ಪ್ರಗತಿಪರ ಸಂಘಟನೆಗಳು, ಇದು ರೈತ ಚಳುವಳಿಯಲ್ಲೇ ಚಾರಿತ್ರಿಕ ವಿಜಯ ಎಂದು ಹರ್ಷ ವ್ಯಕ್ತ ಪಡಿಸಿದರು.
ಇದೇ ವೇಳೆ ಮಾತನಾಡಿದ ಪ್ರಗತಿಪರ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್, ರಾಜ್ಯದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಕೂಡ ಮುಖ್ಯ ಭಾಗವಾಗಿದ್ದು, ಸಂಯುಕ್ತ ಕಿಸಾನ್ ಮೋರ್ಚ ಪತಾಕೆಯಡಿ ನಡೆದ ರೈತ ಚಳುವಳಿ ಈ ವಿಜಯಕ್ಕೆ ವಿಶ್ವವ್ಯಾಪಿ ಮಹತ್ವವಿದೆ. ಇದು 600 ಹುತಾತ್ಮ ರೈತರ ಜೀವ ಕೊಟ್ಟು ರೈತರು ಗಳಿಸಿದ ವಿಜಯ. ಅವರ ಪರಿಶ್ರಮದಾಯಕ ಹೋರಾಟ, ಬಲಿದಾನಗಳಿಂದ ಗಳಿಸಿದ ವಿಜಯ. ಇದರಲ್ಲಿ ಹುತಾತ್ಮ ರೈತರಿಗೆ ಹೃದಯದಾಳದ ಶ್ರದ್ದಾಂಜಲಿಗಳು ಎಂದರು.
ಇತಿಹಾಸವನ್ನು ಬರೆಯುವವರು ಜನರೇ ಎಂದು ಮತ್ತೊಮ್ಮೆ ಸಾಬೀತಾಗಿದೆ. ಹೋರಾಟ ನಡೆಯುತ್ತಿದೆ. ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚದ ಮೇಲೆ ಶೇ.50ರಷ್ಟು ಹೆಚ್ಚಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುತ್ತವೆ ಎಂದು ಘೋಷಿಸಿಲ್ಲ. ಕಾರಣ ರೈತರ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಕಾಯಿದೆ ರೂಪಿಸಬೇಕೆಂದು ಆಗ್ರಹಿಸಿದರು.
ಮತ್ತೋರ್ವ ಮುಖಂಡ ಡಾ.ಟಿ.ಎಸ್.ಸುನೀತ್‌ಕುಮಾರ್ ಮಾತನಾಡಿ, ದೇಶದ ಎಲ್ಲೆಡೆ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಂಡಿಲ್ಲ. ಈ ಕೂಡಲೇ ಹಿಂಪಡೆಯಬೇಕು. ಜತೆಗೆ ರೈತರ ಚಳುವಳಿಯ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆಯಾಗಿಲ್ಲ. ತಕ್ಷಣವೇ ಕ್ರಮ ಕೈಗೊಂಡು ಕಾನೂನು ಅಡಿಯಲ್ಲಿ ಶಿಕ್ಷಿಸಬೇಕು. ಅಲ್ಲದೇ ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಬಲ್ಲೂರು ರವಿಕುಮಾರ್, ತೇಜಸ್ವಿ ಪಟೇಲ್, ಮಂಜುನಾಥ್ ಕೈದಾಳ, ಮಧು ತೊಗಲೇರಿ, ಸತೀಶ ಅರವಿಂದ್, ಅಂಜಿನಪ್ಪ ಅನಿಸ್‌ಪಾಷಾ, ಆದಿಲ್‌ಖಾನ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಇದ್ದರು. 

Attachments area