ಕೃಷಿ ಕಾಯ್ದೆಗನ್ನು ಹಿಂಪಡೆಯಲು ಒತ್ತಾಯ

ಕೋಲಾರ,ಮೇ.೧೮: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯುವ ಮೂಲಕ ರೈತರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವ ವತಿಯಿಂದ ಸಿರಸ್ತೇದಾರ್ ಕೊಂಡಪ್ಪನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸತತವಾಗಿ ಎರಡನೇಯ ಅವಧಿಯ ಆಡಳಿತವನ್ನು ಹಿಡಿದಿದ್ದು, ಕೇಂದ್ರ ಸರ್ಕಾರ ೨೦೨೨ ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಜನರನ್ನು ನಂಬಿಸಿದ್ದು ಆಯಿತು. ಈವರಿಗೆ ವಾಸ್ತವವಾಗಿ ಕೃಷಿಯ ಒಳಸುರುವುಗಳ (ಇನ್ ಪುಟ್ಸ್) ಬೆಲೆಯನ್ನು ಜಾಸ್ತಿ ಮಾಡುತ್ತಾ ಕೃಷಿ ಉತ್ಪಾದನೆಯ ವೆಚ್ಚಗಳನ್ನು ಜಾಸ್ತಿ ಮಾಡುತ್ತಾ ಕೃಷಿಯಲ್ಲಿ ನಷ್ಟವನ್ನು ದ್ವಿಗುಣಗೊಳ್ಳಿಸಿರುತ್ತೀರಿ. ಸುಮಾರು ೬ ತಿಂಗಳಿನಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಯನ್ನು ಹೆಚ್ಚಿಸುವ ಮುಖಾಂತರ ರಾಸಾಯನಿಕ ಗೊಬ್ಬರಗಳ, ಕೀಟನಾಶಕಗಳ ಮತ್ತು ಯಂತ್ರೋಪಕರಣಗಳ ಬೆಲೆಯನ್ನು ಒಂದಕ್ಕೆ ಎರಡರಷ್ಟು ದುಬಾರಿಯಾಗಿದೆ. ರಾಜ್ಯ ಸರ್ಕಾರ ಹನಿ ನೀರಾವರಿ, ತುಂತುರು ನೀರಾವರಿ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊಡುತ್ತಿದ್ದ ಸಹಾಯಧನವನ್ನು ಹಿಂಪಡೆಯಲಾಗಿದೆ. ಪರಿಣಾಮವಾಗಿ ಕೃಷಿ ಮತ್ತು ಕೃಷಿಕ ಏಕಕಾಲಕ್ಕೆ ನಾಶವಾಗುವ ಎಲ್ಲಾ ಲಕ್ಷಣಗಳು ಸ್ವಷ್ಟವಾಗಿ ಕಾಣುತ್ತಿದೆ. ಆ ಕಾರಣದಿಂದ ಈ ಕೆಳ ಕಾಣಿಸಿದ ಎಲ್ಲಾ ಒತ್ತಾಯಗಳನ್ನು ಶೀಘ್ರವಾಗಿ ಈ ಮುಂಗಾರಿನಿಂದಲೇ ಅನುಕೂಲವಾಗುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕ್ರಮ ವಹಿಸದೇ ಹೋದರೇ ರಾಜ್ಯದ ರೈತರು ಸ್ವಹಿತಾಸಕ್ತಿಯ ಬೇರೆಯದೇ ಆದ ಕ್ರಮ ಕೈಗೊಳ್ಳಲು ಮುಂದಾಗಬೇಕಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ತಾಲ್ಲೂಕು ಅಧ್ಯಕ್ಷ ಕೆ.ಆನಂದ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ವೀರಾಪುರ ಮಂಜುನಾಥ್, ತಾಲ್ಲೂಕು ಕಾರ್ಯಾಧ್ಯಕ್ಷರಾದ ವಾನರಾಶಿ ಗೋಪಾಲ್, ಕೋಟೆ ಶ್ರೀನಿವಾಸ್, ನಗರ ಘಟಕ ಕಾರ್ಯದರ್ಶಿ ಅನಂದ್, ನವೀನ್ ಮುನಿರಾಜು ಉಪಸ್ಥಿತರಿದ್ದರು.