ಕೃಷಿ ಕಾಯಿದೆ ವಿರೋಧಿಸಿ ನಾಳೆ ಭಾರತ್ ಬಂದ್

ಬೆಂಗಳೂರು,ಮಾ.೨೫- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ನಾಳೆ ಭಾರತ್ ಬಂದ್‌ಗೆ ರೈತ ಸಂಘಟನೆಗಳು ಕರೆ ನೀಡಿವೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಂದ್ ಯಶಸ್ವಿಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕ ಮತ್ತು ರೈತ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.
ದೆಹಲಿಯ ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ನಾಳೆ ೪ ತಿಂಗಳು ಪೂರ್ಣಗೊಳ್ಳಲಿದೆ. ಹೀಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ನಾಳೆ ಭಾರತ್ ಬಂದ್‌ಗೆ ಕರೆ ಕೊಟ್ಟಿದೆ.
ರಾಜ್ಯದಲ್ಲಿ ಬಂದ್‌ಗೆ ಸಹಕಾರ ನೀಡುವಂತೆ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ. ವ್ಯಾಪಾರಸ್ಥರು, ಕಾರ್ಮಿಕರು, ಆಟೋ ಚಾಲಕರು, ವೊಲಾ, ಊಬರ್ ಸೇರಿದಂತೆ ಎಲ್ಲ ಉದ್ಯಮಿಗಳು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಅನ್ನದಾತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಹೇಳಿದ್ದಾರೆ.
ನಾಳೆ ಕರೆಕೊಟ್ಟಿರುವ ಬಂದ್‌ಗೆ ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ರೈತರು ನೀಡಿರುವ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.
ರಾಷ್ಟ್ರೀಯ ವಾಹನ ಚಾಲಕರ ಒಕ್ಕೂಟದ ಅಧ್ಯಕ್ಷ ಸದಾನಂದಸ್ವಾಮಿ ಪ್ರತಿಕ್ರಿಯಿಸಿ ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ವಾಣಿಜ್ಯ ಬಳಕೆಯ ವಾಹನಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ಆದರ್ಶ ಆಟೋ ಮತ್ತು ಆಟೋ ಅಸೋಸಿಯೇಷನ್ ನಾಳಿನ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸುವುದಾಗಿ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು.
ನಾಳೆ ಶವಯಾತ್ರೆ
ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್‌ಗೆ ಬದಲಾಗಿ ರಾಜ್ಯಾದ್ಯಂತ ಕೃಷಿಕಾಯ್ದೆಗಳ ಶವಯಾತೆ ನಡೆಸಲು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳ ಅವಧಿಯಲ್ಲಿ ೪ ಬಾರಿ ಬಂದ್ ಆಚರಿಸಲಾಗಿದೆ. ಇದಕ್ಕೆ ರಾಜ್ಯದ ಜನತೆ ಬೆಂಬಲ ನೀಡಿದ್ದಾರೆ. ಆದರೆ, ಈ ಬಾರಿ ರಾಷ್ಟ್ರೀಯ ಸಂಯುಕ್ತ ಕಿಸಾನ್‌ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಬಗ್ಗೆ ಪೂರ್ವಯೋಜಿತವಾಗಿ ರಾಜ್ಯದ ಎಲ್ಲ ರೈತರ ಜನಪರ ಸಂಘಟನೆಗಳ ಜತೆ ಚರ್ಚಿಸಿದ ಕಾರಣ ನಾಳಿನ ಬಂದ್ ಯಶಸ್ವಿಗೊಳಿಸುವ ತೀರ್ಮಾನ ಕೈಗೊಂಡಿಲ್ಲ ಎಂದರು.
ಎಲ್ಲ ಜಿಲ್ಲೆಗಳಲ್ಲಿ ಕೃಷಿಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಶಿವಮೊಗ್ಗ ಕಿಸಾನ್ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿರುವುದನ್ನು ಖಂಡಿಸಿದ ಅವರು, ತಕ್ಷಣ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.