ಕೃಷಿ ಕಾಯಿದೆ ಜಾರಿ ರಾಜನಾಥ್ ಸಮರ್ಥನೆ

ನವದೆಹಲಿ ಡಿಸೆಂಬರ್ ೨೬. ಕೇಂದ್ರ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ೧ ಅಥವಾ೨ ವರ್ಷಗಳ ಕಾಲ ಈ ಕಾನೂನುಗಳು ಜಾರಿಯಾಗಲಿ. ಒಂದು ವೇಳೆ ಏನಾದರೂ ಬದಲಾವಣೆ ತರಬೇಕು ಎಂದು ರೈತರು ಬಯಸಿದರೆ ಕಾನೂನುಗಳಿಗೆ ತಿದ್ದುಪಡಿ ತರಲು ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.

ಈ ನಡುವೆ ಗೃಹ ಸಚಿವ ಅಮಿತ್ ಶಾ, ಕೇಂದ್ರ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ೨ ದಿನಗಳ ಹಿಂದೆ ಮಾತನಾಡಿದ್ದೇನೆ. ಪ್ರತಿಭಟನಾ ನಿರತ ರೈತರೊಂದಿಗೆ ಸಂಧಾನ ಮಾತುಕತೆ ನಡೆಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತಿರುವುದು ನೋವಿನ ಸಂಗತಿ ಎಂದು ಪ್ರಧಾನಿ ತಿಳಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ದ್ವಾರಕಾ ಪಟ್ಟಣದಲ್ಲಿ ಏರ್ಪಡಿಸಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಿಂಗ್, ಕನಿಷ್ಠ ಬೆಂಬಲ ಬೆಲೆ ನೀತಿ ಅಡಿಯಲ್ಲಿ ಎನ್ಡಿಎ ಸರ್ಕಾರದ ಅವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸಂಗ್ರಹವಾಗಿದೆ. ಯುಪಿಎ ಸರ್ಕಾರದ ಅವಧಿಗೆ ಹೋಲಿಕೆ ಮಾಡಿದರೆ ಇದು ಅತಿ ಹೆಚ್ಚು ಎಂದು ತಿಳಿಸಿದ್ದಾರೆ.

ಕೇಂದ್ರದ ಕಾನೂನುಗಳ ಬಗ್ಗೆ ಏನಾದರೂ ಸಂಶಯಗಳು ಇದ್ದರೆ ಅಥವಾ ತಪ್ಪುಕಲ್ಪನೆಗಳು ಇದ್ದರೆ ಅವುಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ದೀರ್ಘಕಾಲದವರೆಗೆ ರೈತರು ಧರಣಿ ನಡೆಸುವುದು ಸರಿಯಲ್ಲ ಎಂದು ನಮ್ಮ ಸೋದರ ಸೋದರಿಯರಿಗೆ ತಿಳಿಸಬಯಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ನಾನು ಕೂಡ ರೈತನ ಮಗನಾಗಿದ್ದು ರೈತರ ಹಕ್ಕುಗಳಿಗೆಯಾವುದೇ ರೀತಿಯಲ್ಲಿ ತೊಂದರೆಯಾದರೂ ತಾವು ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ