ಕೃಷಿ ಕಾಯಿದೆ: ಕೇಂದ್ರಕ್ಕೆ ಸುಪ್ರೀಂ ಕಪಾಳಮೋಕ್ಷ – ಕೋಡಿಹಳ್ಳಿ

ತುಮಕೂರು, ಜ. ೧೨- ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರಿಂಕೋರ್ಟ್ ರೈತ ವಿರೋಧಿ ಕಾಯ್ದೆಗಳನ್ನು ತಡೆ ಹಿಡಿಯಿರಿ ಎಂದು ಹೇಳುವ ಮೂಲಕ ಕಪಾಳಮೋಕ್ಷ ಮಾಡಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಜನವರಿ ೨೬ ರಂದು ದೆಹಲಿಯಲ್ಲಿ ಹೋರಾಟ ನಿರತ ರೈತರು ನಡೆಸುವ ಟ್ರಕ್ ಮತ್ತು ಟ್ರ್ಯಾಕ್ಟರ್ ಪೆರೇಡ್‌ಗೆ ಪರ್ಯಾಯವಾಗಿ, ಕರ್ನಾಟಕದಲ್ಲಿಯೂ ಹೋರಾಟ ರೂಪಿಸುವ ಹಿನ್ನೆಲೆಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ನಂತರ ಮಾತನಾಡಿದ ಅವರು, ಪ್ರಜಾಸತ್ಮಾತ್ಮಕವಾಗಿ ಜನಾಭಿಪ್ರಾಯದ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ತರಬೇಕಾದ ಕಾಯ್ದೆಯನ್ನು ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಸುಗ್ರೀವಾಜ್ಞೆ ಮೂಲಕ ಜಾರಿಗೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸದರಿ ಕಾಯ್ದೆಗಳ ಜಾರಿಯನ್ನು ತಡೆ ಹಿಡಿಯಿರಿ, ಇಲ್ಲವೇ ನಾವೇ ತಡೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮೂಲಕ, ಈ ಕಾಯ್ದೆಗಳು ಜನಪರವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಸಹ ಬಂದಿದೆ. ಇದಕ್ಕಾಗಿ ದೇಶದ ರೈತರ ಪರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಧನ್ಯವಾದಗಳು ಎಂದರು.
ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು, ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್ ಮತ್ತು ಸಭೆಯಲ್ಲಿ ಪಾಸ್ ಆಗಬೇಕು ಎಂಬ ಅರಿವಾದರೂ ಇರಬೇಕು. ಅದನ್ನು ಬಿಟ್ಟು ಕಾನೂನಿನ ಬಿಕ್ಕಟ್ಟು ಇದ್ದರೂ ಕಾಯ್ದೆ ಜಾರಿಗೆ ರಾಜ್ಯಪಾಲರು ಸಹಿ ಹಾಕುವ ಮೂಲಕ ತಮ್ಮ ಹುದ್ದೆಗೆ ಅಗೌರವ ತರುವ ರೀತಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ. ೨೬ ರಂದು ನಡೆಯಲಿರುವ ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ರಾಷ್ಟ್ರ ಧ್ವಜದೊಂದಿಗೆ ದೆಹಲಿಯಲ್ಲಿ ಟ್ರ್ಯಾಕ್ಟರ್, ಟ್ರಕ್‌ಗಳೊಂದಿಗೆ ಪೆರೇಡ್ ಮಾಡುತ್ತೇವೆ. ಬೆಂಗಳೂರಿನಲ್ಲಿಯೂ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ರೈತರ ಸಂಕಷ್ಟಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿಲ್ಲ. ಕಾನೂನು ಮಂತ್ರಿಗಳಿಗೂ ಗೊತ್ತಿಲ್ಲದಂತೆಯೇ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರೂಪಿಸಲಾಗುತ್ತಿದೆ. ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ಬಗ್ಗೆ ಸಂಸದರು ಮತ್ತು ಶಾಸಕರುಗಳಿಗೆ ಮಾಹಿತಿಯೇ ಇಲ್ಲ. ಎಲ್ಲವನ್ನು ಕಾರ್ಪೋರೇಟ್ ಕಂಪೆನಿಗಳು ನಿರ್ಧರಿಸುತ್ತಿದ್ದು, ಮೋದಿ ಅವುಗಳ ಗುಲಾಮರಂತೆ ವರ್ತಿಸುತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ರೈತರಿಗೆ ಕರ್ನಾಟಕ ಸರ್ಕಾರ ಸುಳ್ಳು ಭರಸವೆಯ ಕೋಟೆ ಕಟ್ಟುತ್ತಿದೆ. ಕೃಷಿ ಮಾರುಕಟ್ಟೆ ಮುಚ್ಚಿಸುವುದಿಲ್ಲ ಎಂದು ಎಪಿಎಂಸಿ ಬೈಪಾಸ್ ಕಾಯ್ದೆಯನ್ನು ಜಾರಿಗೆ ತಂದು ಕಾರ್ಪೋರೇಟ್ ಮತ್ತು ಎಂಎನ್ಸಿಗಳಿಗೆ ಕೃಷಿ ಉತ್ಪನ್ನ ಖರೀದಿಸಲು ಮಾರಾಟ ಮಾಡಲು ಅವಕಾಶ ಕಲ್ಪಿಸಿ, ನಾಜೂಕಾಗಿ ರೈತರ ದಾರಿ ತಪ್ಪಿಸಿ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಒಂದೆಡೆ ನಾವು ಕೃಷಿ ಮಾರಾಟ ವ್ಯವಸ್ಥೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ರಿಲೆಯನ್ಸ್ ಕಂಪೆನಿ ಹೇಳುತ್ತಿದೆ. ಆದರೆ ರಾಯಚೂರು, ಸಿಂಧನೂರು ರೈತರ ಬಳಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.ಈ ಬಗ್ಗೆ ಯಡಿಯೂರಪ್ಪನವರಿಗೆ ಗೊತ್ತಿಲ್ಲವೇ ಎಂದು ಕೋಡಿಹಳ್ಳಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಬಸವರಾಜಪ್ಪ, ತುಮಕೂರು ಜಿಲ್ಲಾಧ್ಯಕ್ಷ ಆನಂದಪಟೇಲ್, ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು, ಪದಾಧಕಾರಿಗಳು ಉಪಸ್ಥಿತರಿದ್ದರು.