ಕೃಷಿ ಕಾಯಕ ಕೃತ್ಯ ಮಾಡುವ ರೈತನ ಮನೆ ಶುದ್ಧ, ಮನ ಶುದ್ಧ

ಸಿಂಧನೂರು,ಫೆ.೨೮- ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು, ಕೃಷಿಕೃತ್ಯ ಕಾಯಕ ಮಾಡುವವರ ಮನೆ ಶುದ್ಧ, ಮನ ಶುದ್ಧ, ಅವರ ಮನೆಯಲ್ಲಿ ಲಿಂಗಾರ್ಚನೆ ಮಾಡುವುದು ಇನ್ನೂ ಶ್ರೇಷ್ಠ ಎನ್ನುವ ಮೂಲಕ ಅನ್ನದಾತರ ಸ್ವಾವಲಂಬಿ ಬದುಕನ್ನು ಮನದುಂಬಿ ಬಣ್ಣಿಸಿದ್ದಾರೆ ಎಂದು ಬಿಜೆಪಿ ಮುಖಂಡರ ಶಿವನಗೌಡ ಗೊರೇಬಾಳ ಹೇಳಿದರು.
ಗೊರೇಬಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜಾರಾಮರಾವ್ ನಾಡಗೌಡ, ಹನುಮನಗೌಡ ನೆಟೇಕಲ್ ಹಾಗೂ ಬಲಸು ಸುಬ್ಬಾರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಪರಿಷತ್ತಿನ ನಡೆ ಹಳ್ಳಿಕಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಇಡೀ ರಾಜ್ಯದಲ್ಲಿ ಜಿಲ್ಲೆಯಲ್ಲಿ ಸಿಂಧನೂರು ತಾಲೂಕು ವಿವಿಧ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪರಿಷತ್ತು ಪಟ್ಟಣಕ್ಕೆ ಸೀಮಿತವಾಗದೇ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಲ್ಲೂ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ದತ್ತಿ ಕಾರ್ಯಕ್ರಮದಲ್ಲಿ ‘ಕೃಷಿ ಮತ್ತು ಹೈನುಗಾರಿಕೆ’ ಕುರಿತು ಉಪನ್ಯಾಸ ನೀಡಿದ ಶಾಂತಿನಗರದ ಸಾವಯವ ಕೃಷಿಕ ಗೋಪಿ ಬಂಬು ಅವರು, ನಾನು ಎಂಜಿನಿಯರಿಂಗ್ ಪದವೀಧರ. ಕೋವಿಡ್ ಸಂದರ್ಭದಲ್ಲಿ ನಾನು ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ, ಸಾಮಾಜಿಕ ಮಾಧ್ಯಮಗಳಲ್ಲಿ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ಕೃಷಿ ಮಾಡುವುದು ಅಷ್ಟು ಸುಲಭವಲ್ಲ ಅದಕ್ಕೆ ತಾಳ್ಮೆ, ನಿರಂತರ ಪ್ರಯತ್ನ ಬೇಕು. ಇಲ್ಲಿನ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆಯುವ ಬಗ್ಗೆ ಹೊಸ ಪ್ರಯೋಗಗಳನ್ನು ಮಾಡಬೇಕಿದೆ. ಹೈನುಗಾರಿಕೆ, ತೋಟಗಾರಿಕೆ ಮಾಡುತ್ತಿದ್ದೇನೆ. ಎಂಜಿನಿಯ ರಿಂಗ್‌ಗಿಂತಲೂ ಕೃಷಿ ಹೆಚ್ಚು ನೆಮ್ಮದಿ ಕೊಟ್ಟಿದೆ ಎಂದು ಹೇಳಿದರು.
ರೈತ ಮುಖಂಡ ಶರಣೇಗೌಡ ಅವರು ಮಾತನಾಡಿ, ಯಾವುದು ನಿಂತ ನೀರಾಗಬಾರದು. ನಿಂತ ನೀರು ಮಲಿನವಾಗುತ್ತದೆ. ಸಿಂಧನೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಂತ ನೀರಾಗದೇ ಹತ್ತಾರು ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವಜನರಿಗೆ ತಿಳಿಸಿಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕೃಷಿ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆಯಾಗಲು ಕೃಷಿಕರು, ಕೃಷಿ ವಿಜ್ಞಾನಿಗಳು ಹಾಗೂ ಅಣೆಕಟ್ಟುಗಳನ್ನು ನಿರ್ಮಿಸಿದ ಎಂಜಿನಿಯರ್‌ಗಳ ಶ್ರಮ ಮರೆಯುವ ಆಗಿಲ್ಲ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಬಂಗಾರಿಕ್ಯಾಂಪಿನ ಸಿದ್ಧಾಶ್ರಮದ ಸದಾನಂದ ಶರಣರು ಸಾನ್ನಿಧ್ಯವಹಿಸಿದ್ದರು. ಶರಣೇಗೌಡ ನೆಟೇಕಲ್, ಕೆಎಂಎಫ್‌ನ ಬಲಸು ಸೂರ್ಯನಾರಾಯಣ, ಕರೀಶ್ ಜವಾಲಿ, ಮುಖ್ಯ ಶಿಕ್ಷಕಿ ಸುಬ್ಬುಲಕ್ಷಿ?ಮ, ಶರಬಯ್ಯಸ್ವಾಮಿ ಹಿರೇಮಠ, ವೀರೇಶ ಶಿವನಗುತ್ತಿ ಉಪಸ್ಥಿತಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಸಾರಂಗಮಠ ನಿರೂಪಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಶರಬಯ್ಯ ತುರ್ವಿಹಾಳ ಪ್ರಾಸ್ತಾವಿಕ ಮಾತನಾಡಿದರು. ಕರೀಶ್ ಜವಾಲಿ ವಂದಿಸಿದರು.