ಕೃಷಿ ಕಾಯಕದಲ್ಲಿ ಸಫಲತೆ ಕಂಡ ಮಾಶಾಳ ಗ್ರಾಮದ ಪ್ರಗತಿಪರ ರೈತ

ಅರುಣಕುಮಾರ ಬಿ. ಹೂಗಾರ

ಅಫಜಲಪುರ:ಆ.27: ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೊಲವೊಮ್ಮೆ ರೈತರು ಮಾಡುವ ವಿಭಿನ್ನ ಆಲೋಚನೆ ಮತ್ತು ಪ್ರಯತ್ನಗಳಿಂದಾಗಿ ಸಫಲತೆ ಹೊಂದುತ್ತಾರೆ. ಅದರಂತೆ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪ್ರಾಕೃತಿಕ ವಿಕೋಪದಿಂದಾಗಿ ಇತ್ತೀಚೆಗೆ ಕೃಷಿ ಕಾಯಕ ಮಾಡುವುದು ಹಿರಿಮೆಯ ಸಂಕೇತ ಎಂಬ ಭಾವನೆ ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದರೂ ತಪ್ಪಾಗಲಾರದು.

ಸಾಮಾನ್ಯವಾಗಿ ರೈತರು ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಆದರೆ ಇನ್ನು ಕೆಲವು ರೈತರು ಮಳೆಗಾಲದಲ್ಲಿ ವರುಣನಿಗೆ ಸವಾಲು ಹಾಕಿ ಎಷ್ಟೇ ಕಷ್ಟವಾರೂ ಸರಿ ಬೆಳೆಗಳಿಗೆ ಸೂಕ್ತ ಆರೈಕೆ ಮಾಡಿ ಉತ್ತಮ ಫಸಲು ಪಡೆಯುತ್ತೇನೆ ಎಂದೇ ಪಣ ತೊಡುತ್ತಾರೆ. ಇದಕ್ಕೆ ಸರಿಸಾಟಿ ಎನ್ನುವಂತೆ ಸಫಲತೆ ಕಂಡ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಪ್ರಗತಿಪರ ರೈತ ಶಿವಪುತ್ರಪ್ಪ ಜಿಡ್ಡಗಿ ಸೂಕ್ತ ನಿದರ್ಶನವಾಗಿದ್ದಾರೆ.

ದೀರ್ಘಾವಧಿ ಬೆಳೆಯುವ ಸಾಂಪ್ರದಾಯಿಕ ಬೆಳೆಗಳಿಗೆ ರೈತರು ಮೊರೆ ಹೋಗದೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡಿ ಆದಾಯ ತರುವ ಬೆಳೆಗಳಿಗೆ ಒಂದಿಷ್ಟು ಪ್ರಯತ್ನಪಟ್ಟರೆ ಅದು ವಿಫಲವಾಗುವುದಿಲ್ಲ ಎನ್ನುವುದಕ್ಕೆ ಮಾಶಾಳ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದು ನಿಂತ 4 ಎಕರೆ ಕಲ್ಲಂಗಡಿ ಹಣ್ಣು ಸಾಕ್ಷಿಯಾಗಿದೆ.

ಪ್ರಗತಿಪರ ರೈತ ಶಿವಪುತ್ರಪ್ಪ ಜಿಡ್ಡಗಿ ಅವರು ಡ್ರಿಪ್ ಮೂಲಕ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು “ರಸಿಕ” ಎಂಬ ತಳಿಯ ಕಲ್ಲಂಗಡಿ ಹಣ್ಣು ಬೆಳೆಯಲು ಸುಮಾರು 4 ಎಕರೆ ಪ್ರದೇಶದಲ್ಲಿ 4 ಲಕ್ಷ ರೂ. ಖರ್ಚು ಮಾಡಿ ನಾಟಿ ಮಾಡಿದ ಬೀಜವು ಕೇವಲ 60 ದಿನದಲ್ಲೇ ಬೆಳೆದು ನಿಂತು ಇದೀಗ ಮಾರುಕಟ್ಟೆಗೆ ಹೊರಡಲು ಸಜ್ಜಾಗಿ ನಿಂತಿದೆ. ಸದ್ಯದ ಮಾರುಕಟ್ಟೆ ದರವು ಪ್ರತಿ ಟನ್ನಿಗೆ 1850 ರೂ. ಯಂತೆ ಬೇಡಿಕೆ ಬಂದಿದ್ದು ಸುಮಾರು 150 ಟನ್ ಹಣ್ಣು ಮಾರಾಟವಾಗುವ ನಿರೀಕ್ಷೆ ಹೊಂದಲಾಗಿದೆ ಹಾಗೂ ಇಲ್ಲಿ ಬೆಳೆದ ಹಣ್ಣು ದೆಹಲಿ, ಮುಂಬೈ, ಪುಣೆ, ಗೋವಾ, ಹೈದ್ರಾಬಾದ್ ನಂತಹ ಮುಂತಾದ ಪ್ರದೇಶಗಳಿಗೆ ತೆರಳಲಿದೆ.

ಈ ಹಿಂದೆ ಪಪ್ಪಾಯ ಹಣ್ಣು ಬೆಳೆದು ಸಫಲರಾಗಿದ್ದ ರೈತ ಶಿವಪುತ್ರಪ್ಪ ಜಿಡ್ಡಗಿ ತಮ್ಮ ಜಮೀನಿಗೆ ಬರುವ ರೈತರಿಗೆ ಕಲ್ಲಂಗಡಿ ಹಣ್ಣು ಬೆಳೆಯುವ ಕೃಷಿಪದ್ಧತಿ ವಿಧಾನಗಳನ್ನು ತಿಳಿಸಿಕೊಡುತ್ತಾ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮುಂದೆ ಬರಲು ಬೆಳೆಗಳಿಗೆ ಪೂರಕವಾಗಿ ಹೇಗೆ ಕೆಲಸ ಮಾಡಬೇಕು ಮತ್ತು ನಿಯಮಿತವಾಗಿ ಔಷಧ ಸಿಂಪಡಣೆ ಮಾಡುವ ಕುರಿತು ಮಾಹಿತಿ ನೀಡುತ್ತಾ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.


ನಮ್ಮ ರೈತರು ಸಾಂಪ್ರದಾಯಿಕವಾಗಿ ಬೆಳೆಯುವ ದೀರ್ಘಾವಧಿ ಬೆಳೆಗಳಿಗೆ ಮಾರು ಹೋಗದೆ ಕಡಿಮೆ ಅವಧಿಯಲ್ಲಿ ಬೆಳೆಯುವ ಹಣ್ಣು ತರಕಾರಿ ಮತ್ತಿತರ ಬೆಳೆಗಳನ್ನು ಬೆಳೆಯಬೇಕು. ಪರಿಶ್ರಮ ಪಟ್ಟರೆ ಯಾವುದು ವ್ಯರ್ಥವಾಗುವುದಿಲ್ಲ. ಬೆಳೆ ಬೆಳೆಯುವ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆ ರೈತರು ಹೆಚ್ಚಿನ ನಿಗಾ ವಹಿಸಿದರೆ ಉತ್ತಮ ಆದಾಯ ಹೊಂದಬಹುದು.

ಶಿವಪುತ್ರಪ್ಪ ಜಿಡ್ಡಗಿ, ಪ್ರಗತಿಪರ ರೈತ ಮಾಶಾಳ

ನಮ್ಮ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಹೊರತುಪಡಿಸಿ ವರ್ಷವಿಡೀ ಕಲ್ಲಂಗಡಿ ಹಣ್ಣು ಬೆಳೆಯುವ ರೈತರಿದ್ದು ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 1200 ಹೆಕ್ಟೇರ್‍ನಷ್ಟು ಕಲ್ಲಂಗಡಿ ಬೆಳೆಯಲಾಗುತ್ತದೆ. ಪ್ರಸ್ತುತ ಮಳೆಗಾಲದಲ್ಲಿ ಸುಮಾರು 350 ರಿಂದ 400 ಹೆಕ್ಟೇರ್‍ನಷ್ಟು ಕಲ್ಲಂಗಡಿ ಹಣ್ಣು ಬೆಳೆಯಲಾಗಿದ್ದು ಈ ರೈತರು ವರ್ಷವಿಡೀ ಬೆಳೆ ತೆಗೆಯುವ ರೈತರಾಗಿದ್ದಾರೆ. ಇತ್ತೀಚೆಗೆ ಕಲ್ಲಂಗಡಿ ಹಣ್ಣಿನ ಬೇಡಿಕೆ ಹೆಚ್ಚಾಗಿದ್ದು ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಸಲಾಡ್ ಮತ್ತು ಸ್ಟಾರ್ ಹೋಟೆಲ್‍ಗಳಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ನಮ್ಮ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಯೋಜನೆ ಅಡಿಯಲ್ಲಿ ಮಲ್ಚಿಂಗ್ ಪೇಪರ್ ವಿತರಣಾ ಸೌಲಭ್ಯವಿದ್ದು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಎಸ್.ಸಿ/ಎಸ್.ಟಿ ರೈತರಿಗೆ 90% ಹಾಗೂ ಸಾಮಾನ್ಯ ರೈತರಿಗೆ 75% ಸಬ್ಸಿಡಿ ನೀಡುವ ಸೌಲಭ್ಯ ಒದಗಿಸಲಾಗುತ್ತಿದೆ. ರೈತರು ಉತ್ತಮ ಮಾರುಕಟ್ಟೆಯ ಸಂಪರ್ಕ ಹಾಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೆ ಉತ್ತಮ ಆದಾಯ ಹೊಂದಬಹುದು.

    ಸಂತೋಷ ಇನಾಮದಾರ್, ಜಿಲ್ಲಾ ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ಕಲಬುರಗಿ.