ಬ್ಯಾಡಗಿ,ಜೂ.30: ಮೂರು ಕೃಷಿ ಕಾನೂನುಗಳ ಕುರಿತು ಸಚಿವ ಸಂಪುಟದ ತೀರ್ಮಾನ ಒಪ್ಪಲು ಸಾಧ್ಯವಿಲ್ಲ ಕೂಡಲೇ ಬರುವ ಅಧಿವೇಶನದ ಅಜೆಂಡಾದಲ್ಲಿ ತಂದು ಕಾನೂನು ರೀತ್ಯ ಗೆಜೆಟ್ ನೋಟಿಫಿಕೇಶನ್ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ರಾಜ್ಯ ಸಂಚಾಲಕ ಹನುಮಂತಪ್ಪ ದೀವಿಗಿಹಳ್ಳಿ ಆಗ್ರಹಿಸಿದರು.
ಪಟ್ಟಣದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಪಿಎಂಸಿಗಳನ್ನು ರದ್ದುಪಡಿಸಿ ರೈತನಿಗೆ ಮಾರಾಟದ ಹಕ್ಕು ನೀಡುವುದು, ಒಪ್ಪಂದದ ಕೃಷಿಗೆ ಅವಕಾಶ ಹಾಗೂ ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ರೈತರ ಮೇಲೆ ಹಿಡಿತ ಸಾಧಿಸಲು ಹೊರಟಿತ್ತು ಆದರೆ ರೈತರ ಬೃಹತ್ ಪ್ರತಿಭಟನೆ ಬಳಿಕ ಕೃಷಿ ಮೇಲಿನ ತಿದ್ದುಪಡಿ ಕಾಯಿದೆ ಹಿಂಪಡೆದ ಕೇಂದ್ರ ಸರ್ಕಾರ, ಕಾಯಿದೆ ರದ್ದತಿಗೆ ರಾಜ್ಯ ಸರ್ಕಾರಗಳ ವಿವೇ ಚನೆಗೆ ಬಿಡಲಾಗಿದೆ, ಆದರೆ ಕಳೆದ ಸರ್ಕಾರ ಇದನ್ನಾವುದೂ ಮಾಡಿಲ್ಲ ಹೀಗಿರುವಾಗ ನೂತನ ರಾಜ್ಯ ಸರ್ಕಾರ ಸದರಿ ಕಾಯಿದೆಗಳನ್ನು ಅಧಿವೇಶನದಲ್ಲಿ ತಂದು ಹಿಂಪಡೆಯವಂತೆ ಆಗ್ರಹಿಸಿದರು.
ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ: ರಾಜ್ಯದ ಹಲವಾರು ಪ್ರದೇಶಗಳಲ್ಲಿ ಅಸಮರ್ಪಕ ಮಳೆಯಿಂದ ಬರ ಪರಿಸ್ಥಿತಿ ಎದುರಾಗಿದೆ, ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಇನ್ನಿತರ ಕಡೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು ಶೇ. 10ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಆದರೆ ಹವಾಮಾನ ಇಲಾಖೆಯ ವರದಿಯಂತೆ ಮಾನಸೂನ್ ಸಂಪೂ ರ್ಣವಾಗಿ ಕೈಕೊಟ್ಟಿದ್ದು ಬಿತ್ತನೆಗೆ ಅವಕಾಶವಿಲ್ಲದಂತಾಗಿದೆ ಕೂಡಲೇ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಲು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇವೆ ಎಂದರು.
ಬೆಳೆ ನಾಶಪಡಿಸುತ್ತಿರುವುದು ಕಾಣುತ್ತಿಲ್ಲವೇ: ಅಸಮರ್ಪಕ ಪ್ರಮಾಣದ ಮಳೆಯು ರಾಜ್ಯದ ಮಹತ್ವದ ಭಾಗಗಳಲ್ಲಿ ಬರ ಪರಿಸ್ಥಿತಿ ಆತಂಕವನ್ನು ಹೆಚ್ಚಿಸಿದೆ ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ, ಚದುರಿದಂತೆ ಆಗುವ ಮಳೆಯಿಂದ ಬಿತ್ತನೆ ಅಸಾಧ್ಯ ಪ್ರಸ್ತುತ ಮಳೆ ನಮ್ಮ ರೈತರನ್ನು ಭಾರಿ ಒತ್ತಡಕ್ಕೆ ಸಿಲುಕಿಸಿದೆ, ಈಗಾಗಲೇ ಜಿಲ್ಲೆಯ ವಿವಿ ಧೆಡೆ ರೈತರು ಬೆಳೆ ನಾಶಪಡಿಸುತ್ತಿರುವ ಸುದ್ದಿಗಳು ವರದಿಯಾಗಿದ್ದು ಕೂಡಲೇ ಅವರಿಗೆ ಪರಿಹಾರ ನೀಡುವುದೂ ಸೇರಿ ದಂತೆ ಬರಗಾಲ ಘೋಷಿಸುವಂತೆ ಆಗ್ರಹಿಸಿದರು.
ಪರಿಹಾರದ ಮೊತ್ತ ಸಾಲಕ್ಕೆ ಜಮಾ ಬೇಡ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸುಮಾ ಅಸಾದಿ ಮಾತನಾಡಿ, ಬೆಳೆ ಮಾರಾಟದಿಂದ ಹಣ ಬೆಳೆಸಾಲಕ್ಕೆ (ಕ್ರಾಪ್‍ಲೋನ್) ಜಮಾ ಮಾಡಿದಲ್ಲಿ ನಮ್ಮ ತಕರಾರಿಲ್ಲ, ಆದರೆ ಬೆಳೆವಿಮೆ ಬೆಳೆನಷ್ಟ ಪರಿಹಾರ ಸೇರಿದಂತೆ ಇನ್ನಿತರ ಕಾರಣಗಳಿಂದ ನಮ್ಮ ಎಸ್‍ಬಿ ಖಾತೆಗೆ ಬಂದಿರುವ ಹಣ ನಮಗೆ ತಿಳಿಸದೇ ನೇರ ಬೆಳೆ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಲಾಗುತ್ತಿರುವುದು ಖಂಡನೀಯ, ಅಷ್ಟಕ್ಕೂ ಅನುಮತಿ ಇಲ್ಲದೇ ನೇರವಾಗಿ ನಮ್ಮ ಖಾತೆಯಿಂದ ಹಣ ಪಡೆಯೋದು ಅಕ್ಷಮ್ಯ ಅಪರಾಧ ಇಂತಹ ಬ್ಯಾಂಕ್‍ಗಳ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಅಂತಹವರ ವಿರುದ್ಧ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶಿವಯೋಗಿ ಗಡಾದ, ರವಿ ಮಾಳಗೇರ, ಬಸವರಾಜ ಕೋಡಿಹಳ್ಳಿ, ಶಾರದಾ ಮೇಗಳಮನಿ ಸೇರಿದಂತೆ ಇನ್ನಿತರರಿದ್ದರು.