ಕೃಷಿ ಉತ್ಪನ್ನ ಮಾರುಕಟ್ಟೆ ರೈತರಿಗೆ ಪೂರಕ

ಪುತ್ತೂರು, ಎ.೬- ಕೃಷಿ ಉತ್ಪನ್ನ ಮಾರುಕಟ್ಟೆಗಳು ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು ಪುತ್ತೂರು ಎಪಿಎಂಸಿ ಆಡಳಿತ ಅಡಿಕೆ ಬೆಳೆಗಾರರಿಗೆ ಅನುಕೂಲವಾದ ಗೋದಾಮು ಮತ್ತು ಪರಿಸರ ಸ್ನೇಹಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಮಾಡಿದೆ. ಆ ಮೂಲಕ ರೈತರ ಪ್ರಗತಿಗೆ ಶ್ರಮಿಸುತ್ತಿದೆ ಎಂದು ರಾಜ್ಯದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ಸೋಮವಾರ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ರೂ. ೩೫ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಗೋದಾಮು ಕಟ್ಟಡ ಮತ್ತು ರೂ. ೪೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸೋಲಾರ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯು ರೈತರ ಪರವಾಗಿದೆ. ಮುಂದಿನ ದಿನಗಳಲ್ಲಿ ದಲ್ಲಾಳಿಗಳ ಬದಲು ರೈತರೇ ಮಾರುಕಟ್ಟೆ ನಿಯಂತ್ರಿಸುವ ಪರಿಸ್ಥಿತಿ ಬರಲಿದೆ. ದ.ಕ. ಜಿಲ್ಲೆಯಲ್ಲಿ ೨ ಲಕ್ಷ ರೈತರು ಕಿಸಾನ್ ಸನ್ಮಾನ್ ಯೋಜನೆಯ ಲಾಭ ಪಡೆದಿದ್ದಾರೆ. ಆರು ಸಾವಿರ ರೈತರು ಫಸಲು ಭಿಮಾ ಯೋಜನೆಯ ಪರಿಹಾರಧನ ಪಡೆದಿದ್ದಾರೆ. ಜಿಲ್ಲೆಗೆ ಮತ್ತು ತಾಲೂಕುಗಳಲ್ಲಿ ಕೃಷಿ ಉತ್ಪನ್ನಗಳನ್ನು ದಾಸ್ತಾನುಗೊಳಿಸಲು ಶೀತಲೀಕರಣ ಘಟಕಗಳು ಆರಂಭವಾಗಲಿವೆ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ಮಠಂದೂರು ಕೃಷಿಕರ ಬಾಳು ನೆಮ್ಮದಿಯಾಗಿರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಕಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಎಪಿಎಂಸಿ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುತ್ತಿವೆ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಪುತ್ತೂರು ‘ಪುಡಾ’ ಅಧ್ಯಕ್ಷ ಭಾಮಿ ಅಶೋಕ ಶೆಣೈ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಉಪಸ್ಥಿತರಿದ್ದರು. ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಉಪಾಧ್ಯಕ್ಷ ಮಂಜುನಾಥ ಎನ್.ಎಸ್. ವಂದಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲು ಕಾರ್ಯಕ್ರಮ ನಿರೂಪಿಸಿದರು.
ಶ್ರೀಕ್ಷೇತ್ರ ಕದ್ರಿಯಲ್ಲಿ ಲೋಕ ಕಲ್ಯಾಣಾರ್ಥ ’ಸೀಯಾಳಾಭಿಷೇಕ’ ಸಾಮೂಹಿಕ ಪ್ರಾರ್ಥನೆ
ಮಂಗಳೂರು, ಎ.೬- ಕಲ್ಕೂರ ಪ್ರತಿಷ್ಠಾನ ಹಾಗೂ ಹತ್ತು ಸಮಸ್ತರ ವತಿಯಿಂದ ಲೋಕ ಕಲ್ಯಾಣಾರ್ಥ ಇಂದು ಶ್ರೀ ಕ್ಷೇತ್ರ ಕದ್ರಿಯಲ್ಲಿ ’ಸೀಯಾಳಾಭಿಷೇಕ’ವನ್ನು ನೆರವೇರಿಸಲಾಯ್ತು. ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನೇತೃತ್ವವಹಿಸಿದ್ದರು, ಎ.ಜೆ. ಶೆಟ್ಟಿಯವರ ಹಿರಿತನದಲ್ಲಿ ಜರಗಿದ ಕಾರ್ಯಕ್ರಮವನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ದೀಪ ಬೆಳಗಿ ಉದ್ಘಾಟಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಭಟ್ ಅಡಿಗ ಮತ್ತು ಕೃಷ್ಣ ಅಡಿಗರ ಆಚಾರ್ಯತ್ವದಲ್ಲಿ ಸಾಮೂಹಿಕ ಪ್ರಾರ್ಥನೆಗೈಯ್ಯಲಾಯಿತಲ್ಲದೆ, ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗಿನ ಹೋರಾಟದಲ್ಲಿ ಹುತಾತ್ಮರಾದ ೨೨ ಮಂದಿ ಯೋಧರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು.
ಕೋವಿಡ್ ನಿಯಮಾವಳಿಯನ್ನು ಪಾಲಿಸುವ ಮೂಲಕ ಜರಗಿದ ಈ ಸಮಾರಂಭದಲ್ಲಿ ಉಪಮೇಯರ್ ಶ್ರೀಮತಿ ಸುಮಂಗಲಾ ರಾವ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಕದ್ರಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರಾಜು, ಬ್ಯಾಂಕ್ ಆಫ್ ಬರೋಡಾದ ಮಹಾಪ್ರಬಂಧಕರಾದ ಶ್ರೀಮತಿ ಗಾಯತ್ರಿ ಆರ್., ಜೋಗಿ ಸಮಾಜದ ಪ್ರಮುಖ ಕಿರಣ್ ಜೋಗಿ, ಉದ್ಯಮಿ ರತ್ನಾಕರ ಜೈನ್, ಕರುಣಾಕರನ್, ಮಲ್ಲಿಕಾ ಕಲಾವಿದರ ಸಂಸ್ಥೆಯ ಪರವಾಗಿ ಗೋಕುಲ್ ಕದ್ರಿ, ಮನೋಹರ್ ಶೆಟ್ಟಿ, ನಿವೇದಿತಾ ಶೆಟ್ಟಿ, ಶಿವಳ್ಳಿ ಸಂಪದದ ಅಧ್ಯಕ್ಷ ಕೃಷ್ಣ ಕೆ., ಎಸ್.ಕೆ.ಡಿ.ಬಿ.ಯ ಪ್ರಭಾಕರ ರಾವ್ ಪೇಜಾವರ, ಸುಧಾಕರ ರಾವ್ ಪೇಜಾವರ, ಉಜಿರೆ ವಾಸುದೇವ ಭಟ್, ಅರುಣ್ ಕದ್ರಿ, ಎ.ಕೆ. ಪುರುಷೋತ್ತಮ್ ಸಹಿತ ಅನೇಕ ಪ್ರಮುಖರಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸೀಯಾಳವನ್ನು ಸಮರ್ಪಿಸುವ ಮೂಲಕ ಪಾಲ್ಗೊಂಡಿದ್ದರು. ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಏಕಾದಶ ರುದ್ರಾಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.