ಕೃಷಿ ಉತ್ಪನ್ನಗಳ ಬೆಲೆ ನಿಗಧಿಯಲ್ಲಿ ರೈತ ಸ್ವತಂತ್ರನಲ್ಲ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.15 :- ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75ವರ್ಷ ಗತಿಸಿದರೂ ದೇಶದ ಅನ್ನದಾತನಿಗೆ ಇನ್ನೂ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ  ಬಿತ್ತನೆಗೆ ಹಾಕಿದ ಬಂಡವಾಳವು ಸಹ ಸಿಗದಂತಹ ಕಣ್ಣೀರಿನಲ್ಲಿ ಕೈತೊಳೆಯುವ ಸ್ವಾತಂತ್ರ್ಯವಿಲ್ಲದ ಜೀವನ ರೈತ ನಡೆಸುತ್ತಿದ್ದಾನೆ ಎಂದು ಕನ್ನಡ ರಾಜ್ಯೋತ್ಸವ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ತಾಲೂಕಿನ ಹುಲಿಕೇರಿಯ ಸಾವಯವ ಕೃಷಿಕ ಹೆಚ್. ವಿಶ್ವೇಶ್ವರ ಸಜ್ಜನ್ ಅಭಿಪ್ರಾಯ ವ್ಯಕ್ತಪಡಿಸಿದರು. 
ಅವರು ಪಟ್ಟಣದ ಮಹಾತ್ಮಾ ಗಾಂಧೀಜಿ ಪವಿತ್ರ ಚಿತಾಭಸ್ಮದ ಹುತಾತ್ಮರ ಸ್ಮಾರಕ ಆವರಣದಲ್ಲಿ ಗಾಂಧೀಜಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ ಮತ್ತು ಜೆಸಿಐ ಕೂಡ್ಲಿಗಿ ಗೋಲ್ಡನ್ ರವರು ಆಯೋಜಿಸಿದ್ದ ಚಿಂತನ -ಚೇತನ ಸರಣಿ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತ ಹಸಿರು ಕ್ರಾಂತಿ ಎಂಬ ನೆಪದಲ್ಲಿ ಹೈಬ್ರಿಡ್ ತಳಿಯ ವಿಷಭರಿತ ಆಹಾರ ಧಾನ್ಯ ಬೆಳೆ ಕಾಲಿಟ್ಟಿದ್ದು ನಾವೆಲ್ಲ ವಿಷದ ಮಡಿಲಲ್ಲಿ ಬದುಕುತ್ತಿದ್ದೇವೆ ವಿಷದ ಆಹಾರ ಸೇವೆನೆ ಮಾಡಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ನಾವು ಬೆಳೆದ ಆಹಾರವೇ ನಮಗೆ ಔಷಧಿಯಾಗುವ ಉತ್ತಮ ಸಾವಯವ ಕೃಷಿ ನಮ್ಮದಾಗಬೇಕಿದೆ.                                    ಈ ಹಿಂದೆ ರೈತರು ಕೃಷಿಯಲ್ಲಿ ಮುಂದಾಲೋಚನೆ ಇಟ್ಟುಕೊಂಡು ಬೆಳೆದ ಆಹಾರಧಾನ್ಯಗಳ ಶೇಖರಣೆಗೆ ಅಗೇವು, ಗರ್ಚಿ, ವಡೇವುಗಳನ್ನು ಬಳಸಿಕೊಂಡು ಈ ವರ್ಷ ಬಂದ ಬೆಲೆಯನ್ನು ಅವುಗಳಲ್ಲಿ ಸಂಗ್ರಹಿಸಿ ಕಳೆದ ವರ್ಷದ ಬೆಳೆಯ ಧಾನ್ಯಗಳನ್ನು ಬಿತ್ತನೆ ಹಾಗೂ ಆಹಾರಕ್ಕಾಗಿ  ಬಳಸುತ್ತಿದ್ದರು ಯಾವುದೇ ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ ಇಲ್ಲದೆ ಸಾವಯವ ಕೃಷಿ ಆಹಾರಧಾನ್ಯ ಸೇವನೆಯಿಂದ ಆರೋಗ್ಯ ಸಹ ಉತ್ತಮವಾಗಿರುತಿತ್ತು ಆದರೆ ಪರಕೀಯರ ದಾಳಿಯಂತೆ ಕೃಷಿ ಕ್ಷೇತ್ರದಲ್ಲೂ ಪರತಂತ್ರ ಕೃಷಿ ಆಗಮನದಿಂದ ಕೃಷಿಯಲ್ಲಿ ಹಸಿರು ಕ್ರಾಂತಿ ಹೆಸರಲ್ಲಿ ಆರ್ಥಿಕ ಬೆಳೆಯತ್ತ ಮುಂದಾದ ರೈತ ಸ್ವತಂತ್ರ ಕೃಷಿಗೆ ಗುಡ್ ಬೈ ಹೇಳಿದ್ದಾನೆ.  
ಇಂದಿನ ಯುವಕರು ಕೃಷಿ ಬಗ್ಗೆ ಚಿಂತಕರನ್ನಾಗಿ ಮಾಡಬೇಕಿದೆ ಬುದ್ದಿ ಜೀವಿಗಳು ಹಾಗೂ ಕೃಷಿಯಲ್ಲಿ ಜ್ಞಾನ ಪಡೆದ ಅಧಿಕಾರಿಗಳು ಕೃಷಿಯಲ್ಲಿ ತೊಡಗಿ ಪರತಂತ್ರ ಕೃಷಿಯನ್ನು ತೊರೆದು ವಿಷದ ಆಹಾರ ಬೆಳೆಯನ್ನು ಬೆಳೆಯ ಮಧ್ಯದಲ್ಲಿ ಕಳೆ ತೆಗೆದಂತೆ ತೆಗೆದು ಸಾವಯವ ಕೃಷಿಗೆ ಉತ್ತೇಜನ ನೀಡುವ ಮೂಲಕ ಒಳ್ಳೆಯ ಆರೋಗ್ಯದ ಆಹಾರ ಬೆಳೆಬೆಳೆದು ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕಿದೆ  ಎಂದು ಹೆಚ್ ವಿ ಸಜ್ಜನ್ ಯುವಕರಿಗೆ ಕೃಷಿ ಚಿಂತನೆ ತೊಡಗಿಕೊಳ್ಳಲು ಬಗ್ಗೆ ಕಿವಿ ಮಾತು ಹೇಳಿದರು.
ವಿವೇಕಾನಂದ ನಿರೂಪಿಸಿ ವಂದಿಸಿದರು.