ತಿ.ನರಸೀಪುರ: ಜೂ.16:- ಬಿತ್ತನೆ ಬೀಜ,ರಸಗೊಬ್ಬರ ಮತ್ತು ರೈತರ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಆಲಿಸಲು ಕರೆದಿದ್ದ ರೈತರ ಸಭೆಯಲ್ಲಿ ರೈತಗೀತೆಯನ್ನು ಹಾಡಿಸದೆ ರೈತ ವರ್ಗಕ್ಕೆ ಕೃಷಿ ಸಹಾಯಕ ನಿರ್ದೇಶಕರು ಅಪಮಾನ ಮಾಡಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ಮುಖಂಡರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಕರೆದಿದ್ದ ರೈತರ ಸಭೆಯಲ್ಲಿ ರೈತಗೀತೆಯನ್ನು ಹಾಡಿಸದೆ ರೈತಾಪಿ ವರ್ಗವನ್ನು ತುಚ್ಛವಾಗಿ ಕಾಣಲಾಗಿದೆ ಎಂದು ಹಲವು ರೈತ ಮುಖಂಡರು ಮತ್ತು ಕಬ್ಬು ಬೆಳೆಗಾರರ ಸಂಘದ ಮುಖಂಡರು ಸಭೆಯಿಂದ ಹೊರನಡೆದರು.ರೈತರಿಗೆ ಅಪಮಾನ ಮಾಡಿದ ಕೃಷಿ ಸಹಾಯಕ ನಿರ್ದೇಶಕಿ ಸುಹಾಸಿನಿ ನಡೆಯನ್ನು ಖಂಡಿಸಿ ತಾಲೂಕು ಪಂಚಾಯಿತಿಯ ಕಚೇರಿ ಮುಂದೆ ಧರಣಿ ನಡೆಸಿದರು.ಇಂತಹ ಬೇಜವಾಬ್ದಾರಿ ಅಧಿಕಾರಿಯ ವಿರುದ್ಧ ಮೇಲಾಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ,
ಯಾವುದೇ ಸರ್ಕಾರಿ, ಖಾಸಗಿ ರೈತ ಸಭೆಗಳ ಉದ್ಘಾಟನೆಗೆ ಮುನ್ನ ರೈತಗೀತೆಯನ್ನು ಹಾಡಿ ರೈತರಿಗೆ ಗೌರವ ಸಲ್ಲಿಸುವುದು ವಾಡಿಕೆ.ಆದರೆ,ಇಂದಿನ ಸಭೆಯಲ್ಲಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಸ್ವತಃ ಕೃಷಿ ಅಧಿಕಾರಿಯಾಗಿರುವ ಸುಹಾಸಿನಿ ರೈತಗೀತೆಯನ್ನು ಹಾಡಿಸದೆ ಬೇಕಂತಲೇ ರೈತರಿಗೆ ಅವಮಾನ ಮಾಡಿದ್ದಾರೆ.ಕೇವಲ ನೆಪ ಮಾತ್ರಕ್ಕೆ ರೈತ ಸಭೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಉಪಸ್ಥಿತಿ ಇರುವುದು ಕಡ್ಡಾಯ.ಆದರೆ,ತಹಶೀಲ್ದಾರ್,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಹಲವು ಇಲಾಖೆಯ ಅಧಿಕಾರಿಗಳು ಸಭೆಗೆ ಗೈರಾಗಿದ್ದು,ಬೆರಳೆಣಿಕೆ ಅಧಿಕಾರಿಗಳು ಮಾತ್ರ ಸಭೆಗೆ ಹಾಜರಾಗಿದ್ದುದು ಕಂಡುಬಂದಿತು.ರೈತರ ಸಭೆಗಳಿಗೆ ಕೆಲವೇ ಅಧಿಕಾರಿ ವರ್ಗ ಹಾಜರಾದಲ್ಲಿ ರೈತರ ಸಮಸ್ಯೆಗಳನ್ನು ಯಾರಲ್ಲಿ ಹೇಳಿಕೊಳ್ಳುವುದು ಎಂಬ ಪ್ರಶ್ನೆ ಕಾಡುತ್ತದೆ ಎಂದರು.
ಉಡಾಫೆಯ ಕೃಷಿ ಅಧಿಕಾರಿ:
ಬಿತ್ತನೆ ಬೀಜ ,ರಸಗೊಬ್ಬರ ವಿತರಣೆ, ಭತ್ತ ಖರೀದಿ ,ಬೆಳೆ ನಷ್ಟದ ಬಗ್ಗೆ ರೈತರಿಗೆ ಕೃಷಿ ಅಧಿಕಾರಿಯಿಂದ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.ಕಳೆದ ವಾರ ಶೇಂಗಾ ಕಳಪೆ ಬಿತ್ತನೆ ಬೀಜ ಸರಬರಾಜು ಆಗಿರುವ ಬಗ್ಗೆ ರೈತರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಕೃಷಿ ಅಧಿಕಾರಿ ಉಡಾಫೆ ಉತ್ತರ ನೀಡಿದ್ದಲ್ಲದೆ ರೈತರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ.ರೈತರ ಸಂಕಷ್ಟಗಳಿಗೆ ಕೃಷಿ ಅಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ.ಇಂತಹ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ಸಂದರ್ಭದಲ್ಲಿ ತಾಲೂಕು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್,ಗೌರಿಶಂಕರ್ ,ನಂಜುಂಡಸ್ವಾಮಿ ,ಉಮೇಶ್ ,ಸೋಮಶೇಖರ್ ,ಲಿಂಗರಾಜು ,ಕುಮಾರ್ ,ಬಸವರಾಜು,ರಾಜೇಂದ್ರ ,ಯೋಗೇಶ್,ಪುಟ್ಟಸ್ವಾಮಿ ,ಸೋಮಣ್ಣ ಇತರರು ಹಾಜರಿದ್ದರು.