ಕೃಷಿಯೇತರ ಚಟುವಟಿಕೆಗೆ ೩೯ ಸಾವಿರ ಕೋಟಿ ರೂ. ಸಾಲ

ಬೆಂಗಳೂರು, ಸೆ. ೧೫- ಕೊರೊನಾದಿಂದ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಪ್ರಗತಿಗಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ೩೯ ಸಾವಿರ ಕೋಟಿ ರೂ ಸಾಲ ನೀಡುವ ಮೂಲಕ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗುಡಿಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಅಜ್ಜನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮುದ್ದನಪಾಳ್ಯದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲನ್ನು ಅಳೆಯುವ ಮೂಲಕ ಉದ್ಘಾಟಿಸಿ. ಹೊಸಪಾಳ್ಯ, ಅಜ್ಜನಹಳ್ಳಿ, ಕಾಳಯ್ಯನಪಾಳ್ಯ, ಮುದ್ದನಪಾಳ್ಯ ಗ್ರಾಮಸ್ಥರಿಗೆ ವಿವಿಧ ಜಾತಿಯ ಹಣ್ಣು ಬಿಡುವ ಸಸಿಗಳನ್ನು ಉಚಿತವಾಗಿ ವಿತರಣೆ. ಒಂದು ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ರೈತರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಮತ್ತು ಹೈನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯ್ತಿ ಸದಸ್ಯೆ ಕವಿತಾರಾಮಕೃಷ್ಣಯ್ಯ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ೩೦ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಚಿವ ಎಸ್.ಟಿ.ಸೋಮಶೇಖರ್ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಜೊತೆಗೆ ಸಹಕಾರ ರಂಗದ ಅಭಿವೃದ್ಧಿಗೆ ಮುಂದಾಗಿ ಎಲ್ಲಾ ಜನಾಂಗದ ಅಭಿವೃದ್ಧಿಗಾಗಿ ದುಡಿಯುವ ಮೂಲಕ ಬಡವ ಶ್ರೀಮಂತ ಎನ್ನದೆ ಜೊತೆಯಲ್ಲಿ ಕರೆದೊಯ್ಯುವ ಸಹಕಾರಿ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಡಿ.ಹನುಮಂತಯ್ಯ, ವಕೀಲ ರಾಮಕೃಷ್ಣಯ್ಯ, ಮಾಗಡಿ ಯೋಜನಾ ಪ್ರಾಧಿಕಾರ ನಿರ್ದೇಶಕ ಡಿ.ಆನಂದಸ್ವಾಮಿ, ತಾ.ಪಂ ಮಾಜಿ ಉಪಾಧ್ಯಕ್ಶ ರಾಮಚಂದ್ರೇಗೌಡ, ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಸಿ.ಬೋರೇಗೌಡ ಉಪಸ್ಥಿತರಿದ್ದರು.