ಕೃಷಿಯಲ್ಲಿ ವಿಕಲಚೇತನನ ಯಶೋಗಾಥೆ

ಕಲಬುರಗಿ,ನ.18: ನಮ್ಮ ವ್ಯವಹಾರವೇ ಬಿದ್ದೋಯ್ತು. ನಾವು ಬೀದಿಗೆ ಬಂದೆವು ಎಂದು ಹಲವರು ಅಳಲು ತೋಡಿಕೊಂಡಿರುವುದನ್ನು ಕಂಡಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕರು ಆತ್ಮಹತ್ಯೆ ಮಾಡಿಕೊಂಡ ಸಂಖ್ಯೆಯೂ ಸಾಕಷ್ಟಿದೆ. ಹೀಗಿದ್ದಾಗ್ಯೂ, ಇಲ್ಲೊಬ್ಬ ವ್ಯಕ್ತಿ ಅಂಥವರಿಗೆ ಮಾದರಿಯಾಗಿದ್ದಾನೆ. ಮನಸ್ಸಿದ್ದರೆ ಮಾರ್ಗ. ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಾರಿದ್ದಾನೆ.
ತಾಲ್ಲೂಕಿನ ಜಂಬಗಾ(ಬಿ) ಗ್ರಾಮದ ಶಿವಪ್ಪ ಹಣಮಂತ್ ಜಮಾದಾರ್ ತನ್ನ ಎರಡೂ ಕಾಲುಗಳಿಲ್ಲದೇ ಅಂಗವೈಫಲ್ಯ ಹೊಂದಿದ್ದರೂ ಸಹ ದೃತಿಗೆಡದೇ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಕೃಷಿಯನ್ನೇ ತಮ್ಮ ಜೀವನದ ಮಾರ್ಗವನ್ನಾಗಿಸಿಕೊಂಡಿದ್ದಾನೆ. ಶಿವಪ್ಪ ಅವರು ಹುಟ್ಟುವಾಗ ಸದೃಢವಾಗಿದ್ದರು. ಆರು ವರ್ಷಗಳ ನಂತರ ಅವರ ಎರಡೂ ಕಾಲುಗಳು ಸತ್ವ ಕಳೆದುಕೊಂಡರು. ಅಂಗವೈಫಲ್ಯವಿದ್ದರೂ ಸಹ 30 ವರ್ಷಕ್ಕೆ ಮದುವೆಯಾಗಿ ತಮ್ಮ ಉಪಜೀವನಕ್ಕಾಗಿ ಒಂದು ಕಿರಾಣಿ ಅಂಗಡಿಯನ್ನು ಆರಂಭಿಸಿದರು. ಆದಾಗ್ಯೂ, ಅಂಗಡಿ ಸರಿಯಾಗಿ ನಡೆಯದೇ ಇದ್ದುದರಿಂದ ತಮ್ಮ ಒಂದು ಎಕರೆ ಜಮೀನಿನಲ್ಲಿ ಕೃಷಿ ಕಾಯಕವನ್ನು ಆರಂಭಿಸಿದರು.
ಜಮೀನಿನಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಸಿ ಪತ್ನಿಯ ಸಹಾಯದೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದ. ಪಾಲಕ್, ಪುದೀನಾ ಸೊಪ್ಪು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯಲಾರಂಭಿಸಿದ. ಪತ್ನಿಯು ತರಕಾರಿಯನ್ನು ಹೊತ್ತು ವಾಹನಗಳಿಗೆ ಹಾಕಿದರೆ, ಪತಿ ಶಿವಪ್ಪ ಆ ತರಕಾರಿ ಉತ್ಪನ್ನವನ್ನು ತಾನೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬಂದ ಆದಾಯದಿಂದ ಕುಟುಂಬ ಸಾಗಿಸುತ್ತಿದ್ದಾನೆ.
ಎರಡು ಕಾಲುಗಳು ಇಲ್ಲದಿದ್ದರೂ ಕೂಡ ಸ್ವತ: ತಾನೇ ಒಂದು ಎಕರೆ ಜಮೀನಿನಲ್ಲಿ ತರಕಾರಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಪೈಪ್‍ಗಳ ಮೂಲಕ ನೀರು ಬಿಡುತ್ತಾರೆ. ಕಳೆ ಕೀಳುತ್ತಾರೆ. ಸೊಪ್ಪು ಕಟಾವಿಗೆ ಬಂದ ನಂತರ ಪತ್ನಿ ಜಗದೇವಿಯೊಂದಿಗೆ ತನ್ನ ತ್ರಿಚಕ್ರವಾಹನದ ಮೇಲೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಬರುತ್ತಾರೆ. ಸರ್ಕಾರ ಯಾವುದಾದರೂ ಒಂದು ಯೋಜನೆಯಲ್ಲಿ ಕೃಷಿಗೆ ಬೇಕಾಗುವ ಸಲಕರಣೆಗಳನ್ನು ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ವಿಶೇಷಚೇತನನ ಯಶೋಗಾಥೆಯಲ್ಲಿ ಸರ್ಕಾರದ ಯಾವುದೇ ಸಹಾಯವಿಲ್ಲದೇ ಇರುವುದು ಅತ್ಯಂತ ಅಚ್ಚರಿಯ ಹಾಗೂ ಶೋಚನೀಯ ಸಂಗತಿ. ವಿಕಲಚೇತನರಿಗೆ ತ್ರಿಚಕ್ರವಾಹನವನ್ನು ಸರ್ಕಾರ ಕೊಡುವ ಯೋಜನೆ ಇದ್ದು, ಅದಕ್ಕಾಗಿ ಅರ್ಜಿ ಸಲ್ಲಿಸಿದರೂ ಸಹ ತ್ರಿಚಕ್ರವಾಹನ ಸಿಗದೇ ಇರುವುದರಿಂದ ತಾನೇ ಸ್ವತ: ಒಂದು ತ್ರಿಚಕ್ರವಾಹನ ಖರೀದಿಸಿ ಜೀವನದ ಬಂಡಿಯನ್ನು ಸಾಗಿಸುತ್ತಿದ್ದಾರೆ.