ಕೃಷಿಯಲ್ಲಿ ಮಹಿಳೆ ಶ್ರಮ ಅಪಾರ

ರಾಯಚೂರು,ಮೇ.೮- ಮಹಿಳೆಯರು ದೃಢ ಮನಸ್ಸಿನಿಂದ ಕೃಷಿಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರೊಂದಿಗೆ ಸ್ವಾಭಿಮಾನಿಗಳಾಗಿ ಜೀವನ ಸಾಗಿಸಬಹುದು ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಶ್ರಮ ಬಹಳ ಪ್ರಾಮುಖ್ಯತೆ ಮತ್ತು ಅಪಾರವಾದದ್ದು, ಮಹಿಳೆಯರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಕವಿತಾ ಮಿಶ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡ ಮಹಿಳೆ ಮತ್ತು ಉದ್ಯಮಶೀಲತೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೋಟಗಾರಿಕೆ ಜೊತೆ ಅರಣ್ಯ ಕೃಷಿ ಮಾಡಿದರೆ ನಿಜಕ್ಕೂ ಗೆಲವು ಸಾಧ್ಯ. ಮಹಿಳೆ ಶಕ್ತಿಶಾಲಿ ಹಾಗಾಗಿ ಮನೆ ಮತ್ತು ಸಮಾಜ ಬದಲಿಸುವ ಶಕ್ತಿ ಸ್ತ್ರೀಯರಲ್ಲಿದೆ. ಅವರಿಗೆ ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯಲು ಅವಕಾಶ ಕಲ್ಪಿಸಿಕೊಟ್ಟು ಸಮಾನ ಬದುಕನ್ನೂ ರೂಪಿಸಿಕೊಳ್ಳುವಂತೆ ಮಾಡಬೇಕು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಪಾಲ್ಗೊಂಡು ಮುಂಬರಲಿ ಮಹಿಳೆಯರ ಜೀವನದಲ್ಲಿ ಕತ್ತಲು ಕವಿದ ನಂತರ ಬೆಳಕು ಪಸರಿಸುತ್ತದೆ ಎಂದು ಉದ್ಘಾಟಕ ನುಡಿಗಳನ್ನಾಡಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜ ವಿಜ್ಞಾನ ನಿಕಾಯದ ಡೀನ್ ಹಾಗೂ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರು ಪ್ರೊ.ನುಸ್ರತ್ ಫಾತೀಮಾ ಮಾತನಾಡಿ, ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಹಲವಾರು ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಮೆಟ್ಟಿ ನಿಂತು ಹಲವಾರು ಕ್ಷೇತ್ರಗಳಲ್ಲಿ ಸರಿಸಮಾನವಾಗಿದ್ದಾಳೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾವಿವಿಯ ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ ಮಾತನಾಡಿ, ಮಹಿಳೆಯರು ಸಮಾಜದ ಒಂದು ಶಕ್ತಿ ಅವರನ್ನು ನಮ್ಮ ಮಾತೃ ಭೂಮಿಗೆ ಹೊಲಿಸುತ್ತೇವೆ. ಕವಿತಾ ಮಿಶ್ರಾ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿ ಮಣ್ಣಿನ ಜೊತೆ ಜೊತೆಯಾಗಿದ್ದಕ್ಕೆ ಅವರು ಪಟ್ಟ ಶ್ರಮದಿಂದ ಇಂದು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಅವರಿಗೆ ಲಭಿಸಿವೆ ಯಾವುದೇ ಕೆಲಸಗಳು ಮೇಲು ಕೀಳು ಎನ್ನದೇ ನಾವೆಲ್ಲರು ಕೆಲಸ ಮಾಡಲು ಅವರ ಸಾಧನೆಯೇ ನಮಗೆ ಸ್ಪೂರ್ಥಿ ಎಂದು ಅವರು ತಿಳಿಸಿದರು.
ರೇಣುಕಾದೇವಿ ಪ್ರಾರ್ಥಿಸಿದರು, ಮಹಿಳಾ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ತಾಯಪ್ಪ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು, ಡಾ.ಭೀಮೇಶನಾಯಕ ನಿರೂಪಿಸಿದರು, ಡಾ.ಶಾಂತಾದೇವಿ ಅತಿಥಿ ಪರಿಚಯಮಾಡಿದರು, ಡಾ.ಅನಿಲ್‌ಕುಮಾರ ಮಾಣಿಕ್ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.