ಕೃಷಿಯಲ್ಲಿ ದಾಳಿಂಬೆ ಬೆಳೆದು ಕ್ರಾಂತಿ ಮಾಡಿದ ರಾಜೇಶ್ವರ ಶಿವಾಚಾರ್ಯರು

ಬೀದರ್: ಆ.1:ಗುರುಕುಲಾಶ್ರಮದ ರಾಜೇಶ್ವರ ಶಿವಾಚಾರ್ಯರಿಂದ ಕೃಷಿಯಲ್ಲಿ ಕ್ರಾಂತಿಯೇ ನಡೆಯುತ್ತಿದೆ.

ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ನಡೆಯುತ್ತಿದ್ದು ಬಂಪರ್ ಬೆಳೆ ಬೆಳೆಯಲಾಗುತ್ತಿದೆ. ಐದು ಎಕರೆ ಪ್ರದೇಶದಲ್ಲಿ ಕೇಸರ ತಳಿಯ ದಾಳಿಂಬೆ ಬೆಳೆದಿದ್ದು ಬಂಪರ್ ಬೆಳೆ ಬಂದಿದೆ. ಮೂಲತಃ ರೈತ ಕುಟುಂಬದಿಂದ ಬಂದಿದ್ದ ಸ್ವಾಮೀಜಿಯವರು ಕಾವಿಧಾರಿಯಾದರು ಕೃಷಿಯಡೆಗಿನ ಅವರ ಆಸಕ್ತಿ ಕಡಿಮೆಯಾಗಿಲ್ಲ.

ಕೃಷಿಯಲ್ಲಿ ಆಸಕ್ತಿ ತೋರಿಸಿ ದಾಳಿಂಬೆ ಬೆಳೆದ ಸ್ವಾಮೀಜಿ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳ ಗ್ರಾಮದ ಗುರುಕುಲಾಶ್ರಮದ ರಾಜೇಶ್ವರ ಶಿವಾಚಾರ್ಯರ ಸ್ವಾಮೀಜಿಗಳು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅನ್ನ ದಾಸೋಹ, ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಸ್ವಾಮಿಜಿಗಳು ಇತ್ತ ಕೃಷಿಯಲ್ಲಿಯೂ ಕೂಡಾ ಹೆಚ್ಚಿನ ಆಸಕ್ತಿಯನ್ನ ಹೊಂದಿದ್ದಾರೆ. ತಮ್ಮ ಮಠದ 50 ಎಕರೆಯಷ್ಟು ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನ ಬೆಳೆಯುವ ಮೂಲಕ ಕೃಷಿ ಎಡೆಗಿನ ಅವರ ಆಸಕ್ತಿಯನ್ನ ತೋರಿಸಿಕೊಟ್ಟಿದ್ದಾರೆ. ಸುಮಾರು 5 ಎಕರೆಯಷ್ಟು ಜಮೀನಿನಲ್ಲಿ ಕೇಸರ ತಳಿಯ ದಾಳಿಂಬೆ ಹಣ್ಣುಗಳನ್ನ ಬೆಳೆಯಲಾಗುತ್ತಿದ್ದು ಸ್ವಾಮೀಜಿಗಳಿಗೆ ಬಂಪರ್ ಬೆಳೆ ಬಂದಿದೆ.

ಒಂದು ಹಣ್ಣು ಇನ್ನೂರು ಗ್ರಾಂನಿಂದ ಅರ್ಧ ಕೆಜಿವರಗೂ ತೂಕ ಬರುತ್ತಿದೆ. ಕಳೆದ 10 ವರ್ಷದಿಂದ ದಾಳಿಂಬೆ ಕೃಷಿಯಲ್ಲಿ ತೊಡಗಿಕೊಂಡಿರುವ ಸ್ವಾಮೀಜಿಗಳು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಘಳಿಸುತ್ತಿದ್ದಾರೆ. ಇನ್ನೂ ಕೋವಿಡ್ ಅವಧಿಯಲ್ಲಿ ಮೂರು ವರ್ಷಗಳ ಕಾಲ ದಾಳಿಂಬೆಗೆ ದರ ಸಿಕ್ಕಿರಲಿಲ್ಲ ಆದರೆ ಈ ವರ್ಷ ಕೆಜಿಗೆ 120 ರೂಪಾಯಿ ಮಾರಾಟವಾಗುತ್ತಿದ್ದು ಅನೇಕರು ಹೊಲಕ್ಕೆ ಬಂದು ಹಣ್ಣು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ದಾಳಿಂಬೆ ಬೆಳೆಯಲ್ಲಿ ನಷ್ಟವಿಲ್ಲ ಒಳ್ಳೆಯ ರೀತಿಯಲ್ಲಿ ಬೆಳೆ ಬಂದಿದೆ ಎಂದು ಸ್ವಾಮೀಜಿ ಹೇಳಿದ್ರು.

ದಾಳಿಂಬೆಗೆ ರೋಗ ಮತ್ತು ನಿರ್ವಹಣೆಯಿಂದ ಬೆಳೆ ರಕ್ಷಣೆ ಮಾಡಿಕೊಂಡು ಲಾಭ ಗಳಿಸುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿರುವಾಗ ಈ ಸ್ವಾಮೀಜಿ ವೈಜ್ಞಾನಿಕವಾಗಿ ದಾಳಿಂಬೆ ಬೆಳೆದು ಲಕ್ಷಾಂತರ ಲಾಭ ಪಡೆದು ರೈತರು ಹುಬ್ಬೇರಿಸುವಂತೆ ಮಾಡಿದ್ದಾರೆ. ಐದು ಎಕರೆಯಷ್ಟು ದಾಳಿಂಬೆ ಬೆಳೆಯಲು 10 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಮೊದಲ ಫಸಲು ಅಷ್ಟೇನು ಇಳುವರಿ ಬಂದಿಲ್ಲ ಆದರೆ ಎರಡನೇ ಫಸಲು 70 ಟನ್ ವರೆಗೆ ಇಳುವರಿ ಬರುವ ನಿರೀಕ್ಷೆ ಇದೆ. ಹೀಗಾಗಿ ಕೆಜಿಗೆ ನೂರು ರೂಪಾಯಿ ಬೆಲೆ ಸಿಕ್ಕರೂ ಕೂಡಾ ಲಕ್ಷಾಂತರ ರೂಪಾಯಿ ಲಾಭ ಬರುತ್ತದೆ. ದಾಳಿಂಬೆ ಹಣ್ಣು ಕೆಂಪು ಬಂದಷ್ಟು ಬೆಲೆ ಜಾಸ್ತಿ. ಆದರೆ, ಬಯಲು ಸೀಮೆಯಲ್ಲಿನ ಬಿಸಿಲಿನ ತಾಪದಿಂದ ಬಣ್ಣ ಕಳೆದುಕೊಂಡು ಕೆಂಪು ಬಣ್ಣ ನಿರೀಕ್ಷೆಯಷ್ಟು ಬರುವುದಿಲ್ಲ ಆದರೂ ಕೂಡಾ ಇವರು ಎರೆಹುಳು ಗೊಬ್ಬರ ಜಾನುವಾರು ಗಂಜಲವನ್ನ ಆಗಾಗ ಗಿಡಗಳ ಬೇರುಗಳಿಗೆ ಹಾಕುವುದರಿಂದ ಇವರು ಬೆಳೆಸಿದ ದಾಳಿಂಬೆ ಕೆಂಪು ಬಣ್ಣ ಬಂದಿದೆ. ಎಲ್ಲಿಯೂ ಕಾಯಿಗಳು ಬಿರುಕು ಬಿಟ್ಟಿರುವ ಉದಾಹರಣೆ ಇಲ್ಲಾ. ಹೀಗಾಗಿ ಇವರು ಬೆಳೆಸಿದ ದಾಳಿಂಬೆ ಖರೀದಿಸಲು ವ್ಯಾಪಾರಿಗಳು ತಾಮುಂದು ನಾಮುಂದು ಎಂದು ಬಂದು ಇವರ ದಾಳಿಂಬೆ ಖರೀದಿಸುತ್ತಿದ್ದಾರೆ.

ನೈಸರ್ಗಿಕ ಕೃಷಿ ಪದ್ಧತಿ ದಾಳಿಂಬೆ ಬೆಳೆಗೆ

ಒಂದೊಂದು ಹಣ್ಣು 400ರಿಂದ 450 ಗ್ರಾಂ ತೂಕ ಬಂದಿದೆ. ರಸವಾರಿ ಗೊಬ್ಬರವನ್ನು ಹನಿ ನೀರಾವರಿ ಮೂಲಕ ಗಿಡಗಳ ಬುಡಕ್ಕೆ ಹೋಗುವಂತೆ ಮಾಡಿರುವುದು, ಮಿತ ನೀರಿನ ಬಳಕೆಯಿಂದ ಗಿಡಗಳಿಗೆ ಲೀಟರ್ ಪ್ರಮಾಣದಲ್ಲಿ ನೀರು ಹಾಯಿಸಿರುವುದು ಹೀಗೆ ಉತ್ತಮ ನಿರ್ವಹಣೆಯಿಂದ ಭರ್ಜರಿ ಫಸಲು ಕಂಡಿದ್ದಾರೆ. ಕಳೆದ ಆರೇಳು ವರ್ಷದಿಂದ ಬೆಳೆದಿರುವ ಪೈರಿಗೆ ಯಾವುದೇ ಸರ್ಕಾರಿ ಗೊಬ್ಬರದ ಬಳಕೆ ಮಾಡಿಲ್ಲ. ಕೇವಲ ಜೀವಾಮೃತ ಬಳಕೆ ಮಾಡಿಕೊಳ್ಳಲಾಗಿದೆ. ಜೀವಾಮೃತದಿಂದ ಭೂಮಿಯಲ್ಲಿ ಜೀವಿಗಳ ಉಳಿಕೆ ಮತ್ತು ಫಲವತ್ತತೆ ಹೆಚ್ಚಿಸಿದ್ದಾರೆ. ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನೇ ಬಳಸಿ, ಕ್ರಿಮಿಗಳ ದಾಳಿಯಿಂದ ರಕ್ಷಣೆ ಪಡೆದುಕೊಂಡಿದ್ದಾರೆ.