
ಸಂಜೆವಾಣಿ ನ್ಯೂಸ್
ಮೈಸೂರು : ಸೆ.02:- ರೈತರು ಆಧುನಿಕತೆಗೆ ತಕ್ಕಂತೆ ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಿದ್ದು, ಕೃಷಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್ ಹೇಳಿದರು.
ತೋಟಗಾರಿಕೆ ಇಲಾಖೆ, ತೋಟಗಾರಿಕೆ ಮಹಾವಿದ್ಯಾಲಯ ಮತ್ತು ಆಕಾಶವಾಣಿ ವತಿಯಿಂದ ನಗರದ ಜಿ¯?ಲÁ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಣ್ಣು – ಹೊನ್ನು ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಬೇಸಾಯ ಕ್ರಮದ ಬಾನುಲಿ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ರೈತರು ಹೆಚ್ಚಿನ ಆದಾಯ ಗಳಿಸಲು ಸಾಧ್ಯ. ಈ ಹಿಂದೆ ರೈತರು ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿದ್ದರು.
ಆದರೆ, ಹನಿ ನೀರಾವರಿ ವ್ಯವಸ್ಥೆ ಬಂದ ನಂತರ ಕಡಿಮೆ ನೀರು ಬಳಕೆ ಮಾಡಿಕೊಂಡು ಹೆಚ್ಚಿನ ಇಳುವರಿಯನ್ನು ರೈತರು ಪಡೆಯುತ್ತಿದ್ದಾರೆ. ಇದೀಗ ನ್ಯಾನೋ ಯೂರಿಯಾ ಬಂದಿದ್ದು, ಇದನ್ನು ಸ್ಪ್ರೇ ಮಾಡಿದರೆ ಸಾಕು, ಎಲೆಗಳು ಹೀರಿಕೊಳ್ಳುತ್ತದೆ. ಈ ರೀತಿ ಯಾವುದೇ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಾಗ ನಮ್ಮ ಖರ್ಚು ಕಡಿಮೆ ಆಗಿ ಆದಾಯ ಹೆಚ್ಚಾಗುತ್ತದೆ ಎಂದು ಹೇಳಿದರು.
ಮೊಬೈಲ್ ಯುಗದಲ್ಲಿ ಮಾಹಿತಿಗೇನು ಕೊರತೆ ಇಲ್ಲ. ಆದರೆ, ರೈತರು ತಜ್ಞರಿಂದ ಮಾಹಿತಿ ತಿಳಿದು ಅದನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹಣ್ಣು-ಹೊನ್ನು ಬಾನುಲಿ ಸರಣಿ ಕಾರ್ಯಕ್ರಮವನ್ನು ಆಕಾಶವಾಣಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್ ಮಾತನಾಡಿ, ಸೆ.1 ರಿಂದ 8 ತಿಂಗಳ ಕಾಲ ಆಕಾಶವಾಣಿಯ ಕೃಷಿ ರಂಗ ಕಾರ್ಯಕ್ರಮದಲ್ಲಿ ಹಣ್ಣು-ಹೊನ್ನು ಸರಣಿ ಬಿತ್ತರಗೊಳ್ಳಲಿದೆ. ರೈತರಿಗೆ ಮಾರ್ಗದರ್ಶನ ನೀಡಲು ಆಕಾಶವಾಣಿ ಹಲವಾರು ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದು, ಇದರಿಂದ ಕೃಷಿಕರ ಬದುಕಿನಲ್ಲಿ ಹಲವು ಬದಲಾವಣೆಗಳು ಆಗಿವೆ ಎಂದರು.
ಯಾವ ತಿಂಗಳಿನಲ್ಲಿ ಯಾವ ಬೆಳೆ ಬೆಳೆಯಬೇಕು, ಮಾರುಕಟ್ಟೆ ಹೇಗೆ ಎಂಬುದನ್ನು ರೈತರು ತಿಳಿದುಕೊಳ್ಳಬೇಕು. ಯಾವ ರೀತಿಯ ಹಣ್ಣುಗಳನ್ನು ಬೆಳೆಯಬಹುದು ಹಾಗೂ ಮಾರುಕಟ್ಟೆ ಹೇಗೆ ಎಂಬ ಕುರಿತು ಹಣ್ಣು – ಹೊನ್ನು ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ತೋಟಗಾರಿಕಾ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಪಿ.ಸೊರಬದ್ ಮಾತನಾಡಿ, ಆಗಸ್ಟ್‍ನಲ್ಲಿ ಶೇ.83ರಷ್ಟು ಮಳೆಯ ಕೊರತೆ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಯನ್ನು ಹೇಗೆ ಕೈಗೊಳ್ಳಬೇಕು ತೋಟಗಾರಿಕಾ ಬೆಳೆಗಳನ್ನು ಯಾವ ರೀತಿ ನಿರ್ವಹಣೆ ಮಾಡಬಹುದು ಎಂಬುದನ್ನು ರೈತರು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್.ಎಂ.ನಾಗರಾಜ್, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ವಿಷ್ಣುವರ್ಧನ್, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಕೇಶವಮೂರ್ತಿ, ತೋಟಗಾರಿಕಾ ಉಪ ನಿರ್ದೇಶಕ ಮಂಜುನಾಥ್ ಅಂಗಡಿ ಇತರರು ಇದ್ದರು