ಕೃಷಿಭಾಗ್ಯ ಯೋಜನೆಯಡಿ ೩೦ ಸಾವಿರ ಕೃಷಿಹೊಂಡಗಳ ನಿರ್ಮಾಣ 

ದಾವಣಗೆರೆ.ನ.೨೩: ರಾಜ್ಯದ್ಯಾಂತ ಕೃಷಿಭಾಗ್ಯ ಯೋಜನೆಯಡಿ ೩೦ ಸಾವಿರ ಕೃಷಿಹೊಂಡಗಳ ನಿರ್ಮಾಣ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩ ರಿಂದ ೧೮ರ ವರೆಗೆ ಚಾಲನೆಯಲ್ಲಿದ್ದ ಕೃಷಿ ಭಾಗ್ಯ ಯೋಜನೆ ಸ್ಥಗಿತಗೊಂಡಿತ್ತು. ಈಗ ಮತ್ತೆ ಪ್ರಾರಂಭಿಸಲಾಗಿದೆ. ಎನ್‌ಡಿಆರ್‌ಎಫ್‌ನಿಂದ ೧೦೦ ಕೋಟಿ ಅನುದಾನ ದೊರೆಯಲಿದೆ. ರಾಜ್ಯದಲ್ಲಿ ೩೦ ಸಾವಿರ ಕೃಷಿ ಹೊಂಡಗಳ ನಿರ್ಮಾಣ ಮಾಡಲಾಗುವುದು ಎಂದರು.ರಾಜ್ಯದಲ್ಲಿ ಮಳೆಯ ಕೊರತೆಯಿಂದ ೧೩ ಸಾವಿರ ಕೋಟಿಯಷ್ಟು ಬೆಳೆಹಾನಿಯಾಗಿದೆ. ಕೇಂದ್ರದಿಂದ ಪರಿಹಾರ ಕೋರಿ ಪತ್ರ ಬರೆಯಲಾಗಿದೆ. ಗುರುವಾರ(ನ.೨೩) ಕೇಂದ್ರದ ಹಣಕಾಸು ಇಲಾಖೆ ಸಚಿವೆ ನಿರ್ಮಲ ಸೀತಾ ರಾಮನ್ ಭೇಟಿಗೆ ಸಮಯ ನೀಡಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಭೆರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ಭೇಟಿ ಮಾಡಿ, ಬರ ಪರಿಹಾರ ಅನುದಾನವನ್ನ ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಕೋರಲಾಗುವುದು ಎಂದು ತಿಳಿಸಿದರು.ನಮಗೆ ದೊರೆತ ಮಾಹಿತಿಯಂತೆ ಬರ ಪರಿಹಾರ ಅನುದಾನದ ಬಿಡುಗಡೆ ಪ್ರಕ್ರಿಯೆ ಬಹುತೇಕ ಪೂರ್ಣವಾಗಿದೆ.ಗುರುವಾರದ ಭೇಟಿ ಸಮಯದ ನಂತರ ಅನುದಾನ ಬಿಡುಗಡೆಯಾಗುವ ಎಲ್ಲ ವಿಶ್ವಾಸವೂ ಇದೆ. ಕೇಂದ್ರದಿಂದ ಅನುದಾನ ಬಿಡುಗಡೆಯಾಗುತ್ತಿದ್ಧಂತೆಯೇ ಜಿಲ್ಲಾವಾರು ಬರ ಪರಿಹಾರ ವಿತರಣೆಗೆ ಕೃಷಿ, ತೋಟಗಾರಿಕೆ, ಕಂದಾಯ ಮೂರು ಇಲಾಖೆಗಳು ಎಲ್ಲ ಸಿದ್ಧತೆ ಮಾಡಿಕೊಂಡಿವೆ ಎಂದು ತಿಳಿಸಿದರು. ಫ್ರೂಟ್ಸ್‌ನಡಿ ಶೇ. ೧೦೦ ರೈತರ ನೋಂದಣಿ ಮುಗಿದಿದೆ. ಕೆಲವಾರು ಕಡೆ ಆರ್‌ಟಿಸಿ ಜೋಡಣೆ ಮತ್ತಿತರ ತಾಂತ್ರಿಕ ಕಾರಣಗಳಿಂದ ನೋಂದಣಿ ನಡೆಯುತ್ತಿದೆ. ಆದಷ್ಟು ಬೇಗ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಫ್ರೂಟ್ ನಡಿ ನೋಂದಣಿಯಾದಂತಹ ರೈತರಿಗೆ ಬರ ಪರಿಹಾರ, ಬೆಳೆ ವಿಮೆ ಒಳಗೊಂಡಂತೆ ಇಲಾಖೆಯ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.ಕೃಷಿ ವಿಶ್ವವಿದ್ಯಾಲಯಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳುವಂತೆ ಇಲಾಖೆ ಅಽಕಾರಿಗಳಿಗೆ ಸೂಚನೆ ನೀಡಲಾ ಗಿದೆ. ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆ, ಕಡಿಮೆ ಪ್ರಮಾಣದ ನೀರು ಬಳಸಿ ಹೆಚ್ಚು ಇಳುವರಿ ನೀಡುವಂತಹ ಬೆಳೆಗಳು, ಮಣ್ಣಿನ ಫಲವತ್ತತೆ ಆಧಾರದಲ್ಲಿ ಪರ್ಯಾಯ ಬೆಳೆಗಳ ಬೆಳೆಯುವುದು ಒಳಗೊಂಡಂತೆ ರೈತರಿಗೆ ಹೆಚ್ಚಿನ ಮಾಹಿತಿ ನೀಡುವ ಕೆಲಸ ಮಾಡಲಿದ್ದಾರೆ. ಭತ್ತ, ಕಬ್ಬನ್ನು ಇನ್ನೂ ಹೆಚ್ಚಿನ ಯಾಂತ್ರಿಕವಾಗಿ ಕಟಾವು ಮಾಡು ವಂತಹ ೧೦೦ ಕೇಂದ್ರ ಪ್ರಾರಂಭಿಸಲಾಗುವುದು. ಭತ್ತದಂತೆ ತೊಗರಿಯನ್ನೂ ನಾಟಿ ಮಾಡುವ ಪ್ರಯೋಗ ಧನಾತ್ಮಕ ಫಲಿತಾಂಶ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.ಕೇಂದ್ರ ಸರ್ಕಾರ ಯಾಂತ್ರಿಕೃತ ಕೃಷಿಗೆ ಅನುದಾನ ನೀಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೇಂದ್ರಕ್ಕೆ ಪತ್ರವನ್ನೂ ಬರೆದಿದ್ದಾರೆ. ಗುರುವಾರ ಹಣಕಾಸು ಇಲಾಖೆ ಸಚಿವರ ಭೇಟಿ ಸಂದರ್ಭದಲ್ಲಿ ಈ ವಿಷಯವನ್ನೂ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರೇ ಹಣ ಖರ್ಚು ಮಾಡಬೇಕು ಎಂಬುದಾಗಿ ಇಂಧನ ಇಲಾಖೆಯ ಹೊಸ ಮಾರ್ಗಸೂಚಿಗೆ ಎಲ್ಲೆಡೆ ವಿರೋಧ, ಆಕ್ಷೇಪಣೆ ಕೇಳಿ ಬರುತ್ತಿರುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಇಂಧನ ಇಲಾಖೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.