ಕೃಷಿಪತ್ತಿನ ಸೊಸೈಟಿಗಳಿಗೆ ಗ್ಯಾಸ್ ಡೀಲರ್ ಶಿಪ್

ನವದೆಹಲಿ, ಏ.೧೩- ಪ್ರಾಥಮಿಕ ಕೃಷಿಪತ್ತಿನ ಸೊಸೈಟಿಗಳಿಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ , ಎಲ್‌ಪಿಜಿ ಡೀಲರ್‌ಶಿಪ್ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಪುರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ದೇಶದ ಸಹಕಾರ ವಲಯ ಬಲವರ್ಧನೆಗೆ ಕೇಂದ್ರ ಸರ್ಕಾರ ದಾಗಿದೆ.ಈಗಾಗಲೇ ಪೆಟ್ರೋಲ್/ ಡೀಸೆಲ್ ಸಗಟು ಗುತ್ತಿಗೆ ಹೊಂದಿರುವ ಸೊಸೈಟಿಗಳಿಗೆ ಅದನ್ನು ಚಿಲ್ಲರೆ ಮಾರಾಟ ಮಳಿಗೆಗಳಾಗಿ ಬದಲಾಯಿಸುವ ಒಂದು ಬಾರಿಯ ಅವಕಾಶವನ್ನೂ ನೀಡಲು ನಿರ್ಧರಿಸಿದೆ ಎಂದು ಉಭಯ ಸಚಿವಾಲಯಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿವೆ. ಸಕ್ಕರೆ ಸಹಕಾರಿ ಕಾರ್ಖಾನೆಗಳಿಗೆ ಎಥೆನಾಲ್ ಮಿಶ್ರಣ ಯೋಜನೆಯ ಅಡಿ ಎಥೆನಾಲ್ ಮಾರಾಟ ಮಾಡುವ ಅನುಮತಿಯನ್ನು ಆದ್ಯತೆಯ ಮೇರೆಗೆ ನೀಡಲಾಗುತ್ತದೆ ಎಂದು ಹೇಳಿದೆ.
ದೇಶದ ಸಹಕಾರ ವಲಯಕ್ಕೆ ಬಲ ತುಂಬಲು ೨೫ ವಿವಿಧ ಯೋಜನೆಗಳ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳನ್ನು ಗ್ರಾಮೀಣ ಅರ್ಥಿಕಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.