ಕೃಷಿಗೆ ನದಿ ನೀರು ಬಳಸದಂತೆ ಜಿಲ್ಲಾಡಳಿತ ನಿರ್ಬಂಧಮೈಲಾರ ಜಾತ್ರೆ : ಭದ್ರಾ ಜಲಾಶಯದಿಂದ ನದಿಗೆ ನೀರು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ:ಫೆ,20-  ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಜರುಗಲಿರುವ ವಾರ್ಷಿಕ ಜಾತ್ರೆ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗಿದೆ. ನದಿಯ ನೀರು ಮಂಗಳವಾರ ಬೆಳಿಗ್ಗೆ ಮೈಲಾರ ಸುಕ್ಷೇತ್ರ ತಲುಪಿದೆ.
ನದಿಗೆ ಹರಿಸಿರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಬೇಕು. ಕೃಷಿ ಚಟುವಟಿಕೆ, ಇನ್ನಿತರೆ ಚಟುವಟಿಕೆಗಳಿಗೆ ಬಳಸುವುದನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ಜಿಲ್ಲಾಡಳಿತ ಆದೇಶದಂತೆ ತಾಲೂಕಿನ ನದಿ ತೀರದಲ್ಲಿ ಅಳವಡಿಸಿರುವ ಎಲ್ಲ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ತಹಶೀಲ್ದಾರ್. ವಿ.ಕಾರ್ತೀಕ್, ಜೆಸ್ಕಾಂ ಎಇಇ ಕೇದಾರನಾಥ ಅವರು ಸಿಬ್ಬಂದಿಯೊಂದಿಗೆ ತಾಲೂಕಿನ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನವೊಲಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮೋಟಾರ್ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
ಫೆ. 26 ರಂದು ಜರುಗಲಿರುವ ಮೈಲಾಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೆ ಹಾಗೂ ನದಿ ತೀರದ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಫೆ. 18 ರಿಂದ 23ರವರೆಗೆ ಭದ್ರಾ ಜಲಾಶಯದಿಂದ ಪ್ರತಿದಿನ 500 ಕ್ಯೂಸೆಕ್ ನಂತೆ ನದಿಗೆ ನೀರು ಹರಿಸಲಾಗುತ್ತಿದೆ. ಈ ನೀರನ್ನು ಕುಡಿಯುವ ನೀರು ಹೊರತಾಗಿ ಕೃಷಿ, ಇನ್ನತರೆ ಯಾವುದೇ ಚಟುವಟಿಕೆಗೆ ಬಳಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.
ಜಲಾಶಯದಿಂದ ಹರಿಸಿದ ನೀರು ಸೋಮವಾರ ಸಂಜೆ ತಾಲೂಕಿನ ಕುರುವತ್ತಿ ಗ್ರಾಮ ತಲುಪಿದೆ. ಮಂಗಳವಾರ ಬೆಳಿಗ್ಗೆ ಮೈಲಾರ ಸುಕ್ಷೇತ್ರ ತಲುಪುವ ನಿರೀಕ್ಷೆಯಿದೆ.
ರೈತರು, ಸಾರ್ವಜನಿಕರು ನದಿ ನೀರನ್ನು ಕುಡಿಯುವ ನೀರು ಹೊರತಾಗಿ ಅನ್ಯ ಚಟುವಟಿಕೆಗಳಿಗೆ ಬಳಸದೇ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು ಎಂದು ತಹಶೀಲ್ದಾರ್ ವಿ. ಕಾರ್ತೀಕ್ ಮನವಿ ಮಾಡಿದ್ದಾರೆ.
ಮಳೆಯ ಕೊರತೆಯಿಂದ ನದಿ ಬತ್ತಿರುವುದರಿಂದ ಈ ಬಾರಿ ಬೇಸಿಗೆಯಲ್ಲಿ ನದಿ ತೀರದಲ್ಲಿ ಯಾವುದೇ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ ನೀಡಲಾಗಿತ್ತು. ಆದರೂ ಕೆಲವರು ಬೆಳೆಗಳನ್ನು ನಾಟಿ ಮಾಡಿದ್ದು, ಆ ಬೆಳೆಗಳಿಗೆ ನೀರು ಪೂರೈಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

One attachment • Scanned by Gmail