ಕೃಷಿಕ ಸಮಾಜ ಅಧ್ಯಕ್ಷರಾಗಿ ಸಿದ್ರಾಮಯ್ಯ ಸ್ವಾಮಿ: ಸನ್ಮಾನ

ಬೀದರ್: ಮೇ.20:ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಬೀದರ್ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ರಾಮಯ್ಯ ಸ್ವಾಮಿ ಅವರನ್ನು ಬೆಂಗಳೂರಿನ ಸಮಾಜದ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಆಡಳಿತ ಅಧ್ಯಕ್ಷ ಶಿವನಗೌಡ ಅವರು ಶಾಲು ಹೊದಿಸಿ ಸತ್ಕರಿಸಿದರು.

ಸ್ವಾಮಿ ಅವರು ಈಗಾಗಲೇ ಕೃಷಿಕ ಸಮಾಜದ ಭಾಲ್ಕಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ರಾಜ್ಯ ಪ್ರತಿನಿಧಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಜಿಲ್ಲಾ ಅಧ್ಯಕ್ಷ ಸ್ಥಾನ ಅವರಿಗೆ ಒಲಿದಿದೆ.

ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಯ ರೈತರಿಗೆ ಸಹಕಾರಿಯಾಗುವ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಅರ್ಹ ರೈತರಿಗೆ ವಿವಿಧ ಯೋಜನೆಗಳ ಲಾಭ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಸಿದ್ರಾಮಯ್ಯ ಸ್ವಾಮಿ ತಿಳಿಸಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಾದ ಶಿವಕುಮಾರ, ಮಂಜುನಾಥ ಗೌಡ, ಶಿವಣ್ಣ ಮೂಲಿಮನಿ ಇದ್ದರು.