ಕೃಷಿಕಾಯ್ದೆ ತಿದ್ದುಪಡಿ ಹಿಂಪಡಿಕೆಗೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ.ಜೂ.೧೬: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಸೇರಿದಂತೆ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದವ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ರೈತರು ಎಪಿಎಂಸಿ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ವಾಪಸ್ಸು ಪಡೆಯುವುದು ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಬಿಜೆಪಿ ನೇತೃತ್ವದ ಸರ್ಕಾರ ಉಳುವವನೇ ಭೂ ಒಡೆಯ ಎಂಬ ಮಹತ್ವಾಕಾಂಕ್ಷೆಯ ಉದ್ದೇಶಕ್ಕೆ ಕೊಡಲಿ ಪೆಟ್ಟು ಕೊಟ್ಟು ಉಳ್ಳವನೇ ಭೂ ಒಡೆಯನೆಂಬ ನೀತಿಗೆ ಅವಕಾಶ ಕಲ್ಪಿಸುವ ಮೂಲಕ ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಹಾಳುಗೆಡವುದೆ. ದೇಶಪರವಾದ ಸುಧಾರಣೆಗಳನ್ನು ತರಬೇಕಾದ ಸರಕಾರ ಕಾರ್ಪೋರೇಟ್ ಕಂಪನಿಗಳ ಅಮಕೂಲವಾಗುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಎ.ಪಿ.ಎಂ.ಪಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ  ಜಾರಿಗೆ ತಂದು ಹೈನುಗಾರಿಕೆಗೂ ಸಂಕಷ್ಟ ತಂದೊಡ್ಡಿದೆ. ಈ ಕಾಯ್ದೆಗಳ ತಿದ್ದುಪಡಿಯಿಂದ ರೈತ ಸಮುದಾಯಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾರಕವಾಗಿದೆ. ಇದರ ವಿರುದ್ಧ 2020 ರಿಂದಲೂ ನಿರಂತರವಾಗಿ ರಾಜ್ಯದಲ್ಲಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ಯುವಜನತೆ ಮತ್ತು ಪ್ರಗತಿಪರರು ಐಕ್ಯ ಹೋರಾಟವನ್ನು ನಡೆಸುತ್ತಾ ಬಂದಿದ್ದು, ಈ ಹೋರಾಟಗಳಲ್ಲಿ  ವಿಪಕ್ಷ ನಾಯಕನಾಗಿ ವಿರೋಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕಾಯ್ದೆಗಳನ್ನು ರದ್ಧುಪಡಿಸುವುದಾಗಿ ಹೇಳಿದ್ದು, ಈಗ ಕೊಟ್ಟ ಮಾತಿನಂತೆ ಈ ಕಾಯ್ದೆಗಳನ್ನು ರದ್ದುಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರದ ಹನುಮಂತಪ್ಪ, ಅಣಬೇರು ಅಣ್ಣಪ್ಪ, ಕೊಗ್ಗನೂರು ಹನುಮಂತಪ್ಪ, ಎಸ್.ಡಿ. ಪರಮೇಶ್ವರಪ್ಪ, ಕರಿಪಳಪ್ಪ ಚಟ್ಟೋಬನಹಳ್ಳಿ, ರುದ್ರಪ್ಪ ಕೊಗ್ಗನೂರು, ಸಿಡ್ಲಪ್ಪ, ದಶರಥರಾಜ್ ಮತ್ತಿತರರು ಪಾಲ್ಗೊಂಡಿದ್ದರು.