ಕೃಷಿಕರಿಗೆ ೬ ಗಂಟೆ ವಿದ್ಯುತ್ : ಬಿಜೆಪಿ ರೈತ ವಿರೋಧಿ ನೀತಿ – ಖಂಡನೆ

ರಾಯಚೂರು.ಮಾ.೨೪- ರೈತರ ಪರ ಎಂದು ಸುಳ್ಳು ಹೇಳಿಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರ ಕಾಂಗ್ರೆಸ್ ಆಡಳಿತದಲ್ಲಿ ಗ್ರಾಮಾಂತರ ಪ್ರದೇಶಕ್ಕೆ ೧೨ ತಾಸು ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನು ಆರು ತಾಸುಗಳಿಗೆ ಇಳಿಸುವ ಮೂಲಕ ರೈತರ ಗಾಯದ ಮೇಲೆ ಬರೆ ಎಳೆದಿದೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ತಾಯಣ್ಣ ನಾಯಕ ಅವರು ತೀವ್ರವಾಗಿ ಟೀಕಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಅನೇಕ ರೈತರು ತೀವ್ರ ಬೆಳೆ ನಷ್ಟಕ್ಕೆ ಗುರಿಯಾಗಿದ್ದಾರೆ. ಜಿಲ್ಲೆಯಲ್ಲಿಯೂ ಅತಿವೃಷ್ಟಿಯ ಸಮಸ್ಯೆ ತೀವ್ರವಾಗಿದೆ. ಅತಿವೃಷ್ಟಿಯಿಂದ ನಷ್ಟಕ್ಕೆ ಗುರಿಯಾದವರಿಗೆ ಪರಿಹಾರ ನೀಡದೇ, ವಂಚಿಸಿದ ಬಿಜೆಪಿ ಸರ್ಕಾರ ಈಗ ಗಾಯದ ಮೇಲೆ ಬರೆಯಂತೆ ೧೨ ಗಂಟೆಗಳ ವಿದ್ಯುತ್ ಪೂರೈಕೆಯನ್ನು ೬ ಗಂಟೆಗೆ ಇಳಿಸುವ ಮೂಲಕ ರೈತರ ಬೆಳೆ ನಷ್ಟಕ್ಕೆ ಕಾರಣವಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ೧೨ ಗಂಟೆ ವಿದ್ಯುತ್ ಪೂರೈಸುವ ಮೂಲಕ ಈ ಹಿಂದಿನ ಕಾಂಗ್ರೆಸ್ ಸರ್ಕಾರ ರೈತರಿಗೆ ನೆರವಾಗಿತ್ತು.
ಆದರೆ, ರೈತ ಪರ ಸರ್ಕಾರವೆಂದು ಹೇಳಿಕೊಳ್ಳುವ ಬಿಜೆಪಿ ರೈತರಿಗಾಗಿ ೨೪ ಗಂಟೆ ವಿದ್ಯುತ್ ಪೂರೈಕೆ ಮಾಡದೇ, ಇರುವ ೧೨ ಗಂಟೆಗಳ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿ, ೬ ಗಂಟೆಗಳ ಕಾಲ ಮಾತ್ರ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗಾಗಲೇ ಅತಿವೃಷ್ಟಿಯಿಂದ ತೀವ್ರ ಬೆಳೆ ನಷ್ಟಕ್ಕೆ ಗುರಿಯಾದ ರೈತರಿಗೆ ವಿದ್ಯುತ್ ಕಡಿತದ ಈ ಸಮಸ್ಯೆ ಮತ್ತೊಂದು ಭಾರೀ ನಷ್ಟದ ಹೊಡೆತ ನೀಡಲಿದೆ. ೨೦೧೭ ರಲ್ಲಿ ೨೪ ಗಂಟೆಗಳ ವಿದ್ಯುತ್ ಪೂರೈಕೆಗಾಗಿ ಗಾಣದಾಳದಿಂದ ಆರ್‌ಟಿಪಿಎಸ್‌ಗೆ ಪಾದಯಾತ್ರೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವೀರಾವೇಷ ತೋರಿದ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ?.
ಅಂದು ೨೪ ಗಂಟೆಗಳ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿದ ಶಾಸಕರು, ಮಾಜಿ ಶಾಸಕರು ಈಗ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಜಿಲ್ಲೆಯ ರೈತರಿಗೆ ೧೨ ಗಂಟೆಗಳ ವಿದ್ಯುತ್ ಪೂರೈಕೆ ಅವಧಿ ಕಡಿತಗೊಳಿಸಿರುವುದನ್ನು ಏಕೆ ವಿರೋಧಿಸುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಕೇವಲ ಭ್ರಷ್ಟಾಚಾರವೊಂದೇ ಪ್ರಮುಖವಾಗಿದೆ. ಜನಪರವಾದಂತಹ ಕಾಳಜಿಯೇ ಇಲ್ಲದ ಈ ಸರ್ಕಾರ ರಾಜ್ಯಕ್ಕೆ ಶಾಪವಾಗಿದೆ. ಶೀಘ್ರವೇ ಈ ಹಿಂದಿನ ರೀತಿಯಲ್ಲಿ ೧೨ ಗಂಟೆಗಳ ವಿದ್ಯುತ್ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೇ, ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಅವರು ಎಚ್ಚರಿಸಿದ್ದಾರೆ.