
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.07: ಕೃತಿ ಹೊರ ತರುವುದು ಸುಲಭದ ಕೆಲಸವಲ್ಲ, ಕವಿಯಾದವನಿಗೆ ಕೃತಿ ಹೊರ ತರುವುದು ತಾಯಿ ಗರ್ಭದಿಂದ ಹೊರ ಬಂದಂತೆ ಎಂದು ಸಾಹಿತಿ ಡಾ.ದಯಾನಂದ ಕಿನ್ನಾಳ್ ಹೇಳಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಭಾನುವಾರ ಶೀಲಾ ಮಂಜುನಾಥ ಬಡಿಗಿ ರಚಿತ ವಿಜಯಸಿರಿ ಇತಿಹಾಸದ ಗರಿ ಕವನಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಗೀಚಿದ ಒಂದು ಕವನ ಕಥೆ ಎಂಟು ಹತ್ತು ಬಾರಿ ಓದಬೇಕು. ಓದಿದ್ದನ್ನು ತಿದ್ದಬೇಕು. ಒಪ್ಪ ಓರಣವನ್ನಾಗಿಸಿ ಸಂಕಲಿಸಬೇಕು. ಮುದ್ರಣಕ್ಕೆ ರವಾನಿಸಬೇಕು. ಮುದ್ರಾ ರಾಕ್ಷಸನಿಂದ ಆದ ತಪ್ಪುಗಳನ್ನು ಪುಟಕ್ಕೆ ಸರಿಹೊಂದಿಸಿ ಇಡಿ ಪುಸ್ತಕ ರೂಪಕ್ಕೆ ತಂದು ಸಾಹಿತ್ಯಾಸಕ್ತರ ಮಧ್ಯ ಬಿಡುಗಡೆಮಾಡಬೇಕು. ಸಹೃದಯಿಗಳಿಗೆ ಮೆಚ್ಚುಗೆಯಾದಾಗ ಮಾತ್ರ ಹೆರಿಗೆಯಾದದ್ದು ಸಾರ್ಥಕವಾಗುತ್ತದೆ ಎಂದರು.
ಶೀಲಾ ಬಡಿಗಿಯವರು ಬಡತನ ಹತಾಶೆ ನಿರಾಶೆಯ ಬವಣೆಯಲ್ಲಿ ಬೆಳೆದು ಬಂದದ್ದರಿಂದ ನಾಡು ನುಡಿಯ ಬಗ್ಗೆ ಅಮ್ಮನ ಬಗ್ಗೆ ದಾಂಪತ್ಯದ ಬಗ್ಗೆ ಬಾಲ್ಯದ ಬಗ್ಗೆ ಬರೆಯುವಂತಾಯಿತು ಎಂದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ನಿವೃತ್ತ ಅಧ್ಯಾಪಕ ಪ್ರೊ ವಿಜಯಕುಮಾರ್ ನೆಪೋಲಿಯನ್ ಪುಸ್ತಕ ಹೊರತರುವುದೆಂದರೆ ಟಂಕಸಾಲೆಯಲ್ಲಿ ಒಂದೊಂದೆ ನಾಣ್ಯವನ್ನು ಕಟೆದು ಹೊರತೆಗೆದಂತೆ ಎಂದರು. ಒಂದೊಂದು ಕೃತಿಯು ಅಮೂಲ್ಯವಾದ ರತ್ನಗಳಾಗುತ್ತವೆ. ರತ್ನಗಳನ್ನು ನಾಡಿಗೆ ನೀಡಿದ ಕೀರ್ತಿ ಲೇಖಕಿಗೆ ಸಲ್ಲುತ್ತದೆ ಎಂದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೇಖಕಿ ಸಮಾಜದ ಕಾರ್ಯ ಮಾಡುತ್ತಿರುವುದು ಸಂತಸದ ವಿಷಯ. ಅದರಲ್ಲೂ ಮಹಿಳಾ ಲೇಖಕಿಯಾಗಿ ಹೊರಹೊಮ್ಮಿದ್ದು ಹೆಮ್ಮೆಯ ಸಂಗತಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಧರ್ಮನಗೌಡ ಹೇಳಿದರು.
ಡಾ.ಎಸ್.ಡಿ.ಸುಲೋಚನ ಅಧ್ಯಕ್ಷತೆ ವಹಿಸಿದ್ದರು. ಆಶೀರ್ವಚನ ನೀಡಿದ ಜಾಂಬವ ಬ್ರಹ್ಮಾನಂದಮುನಿ ಸ್ವಾಮಿ ಶಾಖಾ ಪೀಠಾಧ್ಯಕ್ಷರು ಮತ್ತು ಪಟ್ಟಾಧ್ಯಕ್ಷರು ಹಿರಿಯರು ಮಹಿಳಾ ಲೇಖಕಿಯಾಗಿ ಸಮಾಜದ ಮಧ್ಯ ಅರಳಿರುವುದು ಖುಷಿ ತರುತ್ತೆ. ದೀರ್ಘಾಯುಷಿಯಾಗಿ ನೂರಾರು ಕೃತಿಗಳು ಹೊರಬರಲೆಂದು ಹಾರೈಸಿ ದಂಪತಿಗಳಾದ ಶೀಲಾ ಮತ್ತು ಮಂಜುನಾಥ ಬಡಿಗಿ ಇವರಿಗೆ ಆಶೀರ್ವದಿಸಿದರು.
ಡಾ.ಉಷಾರಾಣಿ, ಉದೇದಪ್ಪ, ನೂರ್ ಜಹಾನ್, ತಾಯಿ ಕರಿಯಮ್ಮ, ಚಂದ್ರಶೇಖರಯ್ಯ ರೋಣದಮಠ, ಟಿ.ಯಮನಪ್ಪ, ಮುದೇನೂರ್ ಉಮಾಮಹೇಶ್ವರ, ಕೆ.ಪ್ರಹ್ಲಾದರಾವ್, ವಿಶಾಲ್ ಮ್ಯಾಸರ್, ಶೋಭಾ ಶಂಕರಾನಂದ, ಗೀತಾ ಸುರೇಶ್, ಕವಿತಾ ನಾಯ್ಡು, ವಿ.ಪರಶುರಾಮ, ಡಿ.ಬಸಂತ ಮತ್ತು ಕುಟುಂಬಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿನಾ ನಂದನ್ ಮತ್ತು ನಾಗರಾಜ ಪತ್ತಾರ್ ಪ್ರಾರ್ಥಿಸಿದರು. ನಯನಾ ಉಮೇಶ್ ಸ್ವಾಗತಿಸಿದರು. ಯಮುನಾ ಕುಲಕರ್ಣಿ ನಿರೂಪಿಸಿದರೆ ಶಿಕ್ಷಕ ಯರಿಸ್ವಾಮಿ ವಂದಿಸಿದರು.