ಕೃತಿಯನ್ನು ಆಲಿಸಿ ಆಲಂಗಿಸಿದಾಗ ಶ್ರೇಷ್ಠತೆ ಹೆಚ್ಚುತ್ತದೆ: ಸುಚೇಂದ್ರ ಪ್ರಸಾದ್

ತುಮಕೂರು, ಜು. ೧೬- ಶಿವರಾಮ ಕಾರಂತ ರವರ ‘ಬೆಟ್ಟದ ಜೀವ’ ಕೃತಿಯಲ್ಲಿ ಗಾಢ ಸ್ತ್ರೀಪರ ಸಂವೇದನೆಯಿದೆ. ಒಂದು ಕೃತಿಯನ್ನು ಹೃದಯಕ್ಕೆ ಹತ್ತಿರವಾಗಿಸಿ ಓದುವುದರಿಂದ ಅದರ ಶ್ರೇಷ್ಠತೆಯನ್ನು ಹೆಚ್ಚಿಸಬಹುದು ಎಂದು ಚಿತ್ರನಟ ಸುಚೇಂದ್ರ ಪ್ರಸಾದ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರವು ವಿವಿಯ ವಿಶ್ವೇಶ್ವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಟ್ಟದ ಜೀವ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿನಿಮಾದಲ್ಲಿ ಭಾವನೆಗಳಿಗೆ ನಿರ್ದಿಷ್ಟ ಚೌಕಟ್ಟನ್ನು ನೀಡಲಾಗುತ್ತದೆ. ಆದರೆ ಬೆಟ್ಟದ ಜೀವ ಕೃತಿಯನ್ನು ಓದುವುದರಿಂದ ಅವರಿಗೆ ಅವರದ್ದೇ ಆದ ಭಾವನೆಗಳು, ಕಲ್ಪನೆಗಳು ವಿವಿಧ ಆಯಾಮಗಳ ಯೋಚನೆಗಳು ಬಂದು ಚಿಂತನೆಗೆ ಹಚ್ಚುತ್ತವೆ ಎಂದರು.
ಒಂದು ಕೃತಿಯನ್ನು ವ್ಯಕ್ತಿಯ ಜೀವನದ ಮೂರು ಹಂತಗಳಲ್ಲಿ ಓದಬೇಕು. ಹಾಗೆ ಓದುವುದರಿಂದ ಅನೇಕ ಭಾವನೆಗಳು ಆಯಾ ಹಂತಗಳಿಗೆ ತಕ್ಕಂತೆ ಅರ್ಥವಾಗುತ್ತದೆ. ಭಾವನೆಗಳಿಗೆ ದಟ್ಟವಾದ ತೀವ್ರತೆ, ಭಾವಬಂಧ ಭವಬಂಧ ಇವೆಲ್ಲವಕ್ಕೂ ಅವಕಾಶ ಬೆಟ್ಟದ ಜೀವ ಕೃತಿಯಲ್ಲಿ ಕಂಡು ಬರುತ್ತದೆ ಎಂದರು.
ಕಾರಂತರ ಈ ಕೃತಿಯಲ್ಲಿ ಬರೆದಿರುವ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಶಿಕ್ಷಣ ಜೀವಸೆಲೆಯಾಗಬೇಕು. ಆದರೆ ಶಿಕ್ಷಣ ಪಡೆದ ಶಂಕರಮ್ಮನ ಮಗ ಶಂಭು ತನ್ನ ತಾಯಿಯನ್ನು ತೊರೆಯುತ್ತಾನೆ. ಅವರ ಮಗಳು ಮದುವೆಯಾಗಿ ತವರು ಮನೆಯನ್ನು ತೊರೆಯುತ್ತಾಳೆ. ಹಾಗಾಗಿ ಆಕೆಗೆ ಒಂಟಿತನ ಕಾಡುತ್ತದೆ. ಇಂದು ಹಳ್ಳಿ ಹಳ್ಳಿಗಳನ್ನು ವೃದ್ಧಾಶ್ರಮವಾಗಿಸಿದ ಸಂಸ್ಕೃತಿ ಜಾರಿಯಲ್ಲಿದೆ. ಅದನ್ನು ಕಾರಂತರು ೧೯೪೩ನೇ ಇಸವಿಯಲ್ಲಿ ಮಾರ್ಮಿಕವಾಗಿ ಹೇಳಿದ್ದರು ಎಂದರು.
ತುಮಕೂರು ವಿವಿ ಸಿಂಡಿಕೇಟ್ ಸದಸ್ಯೆ ಭಾಗ್ಯಲಕ್ಷ್ಮಿ ಹಿರೇಂದ್ರ ಶಾ ಮಾತನಾಡಿ, ಭಾಷೆ ಬಿಟ್ಟು ಜೀವವಿಲ್ಲ. ಬೆಟ್ಟದ ಜೀವ ಕೃತಿಯಲ್ಲಿ ಭಾಷೆ ಸಮೃದ್ಧ ಬಳಕೆಯನ್ನು ಕಾರಂತರು ಮಾಡಿದ್ದಾರೆ ಎಂದರು.
ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಮಾತನಾಡಿ, ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣ ಉಂಟಾದಾಗ ಮಾತ್ರ ಸಮಾನತೆ ಬರುತ್ತದೆ. ಸ್ತ್ರೀ ಭಿನ್ನ ಆಯಾಮಗಳಿಂದ ಕೂಡಿದ ಶಕ್ತಿ. ಹಾಗಾಗಿ ಸ್ತ್ರೀ ಕುರಿತ ಎಲ್ಲ ಆಯಾಮಗಳಲ್ಲಿಯೂ ಅಧ್ಯಯನ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಪ್ರಭಾರ ಕುಲಪತಿ ಪ್ರೊ. ಕೇಶವ ಮಾತನಾಡಿ, ಸ್ತ್ರೀ ಸಂವೇದನೆ ಅರ್ಥವಾಗಬೇಕಾದರೆ ಸಮಾನತೆ ಅವಶ್ಯಕತೆ. ಸ್ತ್ರೀಪರ ಸಂವೇದನೆ ಸ್ತ್ರೀಯರಿಗೆ ಮಾತ್ರವಲ್ಲದೆ ಪುರುಷರಿಗೂ ಅರ್ಥವಾಗಬೇಕು. ಕರಾವಳಿ ತೀರದಲ್ಲಿ ಉದಯಿಸಿದ ಈ ಕೃತಿ ನಿಜಕ್ಕೂ ಅಲ್ಲಿನ ಭೌತಿಕ ಮತ್ತು ಮಾನಸಿಕ ಸಂವೇದನೆಯನ್ನು ಕಟ್ಟಿಕೊಟ್ಟಿದೆ ಎಂದರು.
ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್‌ರಾಜು, ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.