ಕಲಬುರಗಿ,ಜು.30: ಸಮಾಜದ ಸುಧಾರಣೆಗಾಗಿ ವಿವಿಧ ಉಪಯುಕ್ತತೆಗಳು ಮತ್ತು ಅಪ್ಲಿಕೇಶನ್‍ಗಳಲ್ಲಿ ಕೃತಕ ಬುದ್ಧಿಮತ್ತೆಯು ವೇಗವಾಗಿ ಹೊರಹೊಮ್ಮುತ್ತಿರುವ ಪ್ರಾಮುಖ್ಯತೆಯನ್ನು ಸ್ಪೇನ್‍ನ ಯೂನಿವರ್ಸಿಡಾಡ್ ಪಬ್ಲಾ ಡಿ ಒಲವೈಡ್‍ನಲ್ಲಿರುವ ಡೇಟಾ ಸೈನ್ಸ್ ಮತ್ತು ಬಿಗ್ ಡೇಟಾ ಲ್ಯಾಬ್‍ನ ಕೃತಕ ಬುದ್ಧಿಮತ್ತೆಯಲ್ಲಿ ಪರಿಣಿತರಾದ ಡಾ. ಮಿಗುಯೆಲ್ ಗಾರ್ಸಿಯಾ ಟೊರೆಸ್ ಒತ್ತಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ರವಿವಾರದಂದು ಮಹಿಳಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ, ಮೆಕ್ಯಾನಿಕಲ್ ವಿಭಾಗ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಮಶೀನ್ ಲರ್ನಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಫ್ಯೂಚರಿಸ್ಟಿಕ್ ತಂತ್ರಜ್ಞಾನಗಳು ಮತ್ತು ಕ್ಷಿಪಣಿ ಹಾಗೂ ಏರೋಸ್ಪೇಸ್ ತಂತ್ರಜ್ಞಾನಗಳ ಉಪನ್ಯಾಸಗಳ ಸರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ ಟೊರೆಸ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ತಾಂತ್ರಿಕ ಅಂಶದ ಬಗ್ಗೆ ವಿವರವಾಗಿ ತಿಳಿ ಹೇಳಿದರು. ಇದು ಎಲ್ಲಾ ಅಪ್ಲಿಕೇಶನ್‍ಗಳನ್ನು ತನ್ನ ವ್ಯಾಪಕ ಶ್ರೇಣಿಯ ಬಳಕೆ ಮತ್ತು ಅಪ್ಲಿಕೇಶನ್‍ನೊಂದಿಗೆ ರಭಸದಿಂದ ತೆರೆದುಕೊಳ್ಳುತ್ತಿದೆ ಎಂದು ಹೇಳಿದರು.
ಕೃತಕ ಬುದ್ಧಿಮತ್ತೆಯನ್ನು ಹಲವು ಅಪ್ಲಿಕೇಶನ್‍ಗಳಲ್ಲಿ ಅನ್ವಯಿಸಬಹುದು ಮತ್ತು ದಕ್ಷಿಣ ಅಮೆರಿಕಾದ ಪರಾಗ್ವೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬೇಕರಿ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಉಪಯುಕ್ತ ಅಪ್ಲಿಕೇಶನ್‍ನ ಕುರಿತು ಕಳೆದ ಒಂದು ವರ್ಷದಿಂದ ಸ್ವತಃ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪರಾಗ್ವೆಯ ಲೇಡಿ ಬೇಕರ್ ಶ್ರೀಮತಿ ಜೂಲಿಯೆಟಾ ಮೆಂಡೆಜ್ ಅವರು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡಿದ್ದಾರೆ. ಬೇಕರಿ ಉದ್ಯಮದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಕೆಯಿಂದ ಬೇಕರಿ ಉತ್ಪನ್ನಗಳ ಗುಣಮಟ್ಟ ಮತ್ತು ಅದರ ವಿತರಣೆಯನ್ನು ಸುಧಾರಿಸಲು ಬಹಳ ಸಹಾಯವಾಗಿದೆ ಎಂದು ಡಾ ಟೊರೆಸ್ ಹೇಳಿದರು.
ನಂತರ ಶರಣಬಸವ ವಿಶ್ವವಿದ್ಯಾಲಯದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲನಿರ್ಂಗ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಟೊರೆಸ್ ಅವರು ಸಂವಾದ ನಡೆಸಿದರು.
ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‍ಡಿಒ) ಹಿರಿಯ ವಿಜ್ಞಾನಿ ಡಾ ಜಿ ಮಲ್ಲಿಕಾರ್ಜುನ್ ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಟೆಕ್ನೋ ಸೋಶಿಯಲ್ ಅವೇರ್ನೆಸ್ ವಿಷಯದ ಕುರಿತು ಉಪನ್ಯಾಸ ನೀಡಿದರು. ದೇಶದ ಕ್ಷಿಪಣಿ ಕಾರ್ಯಕ್ರಮದಲ್ಲಿ ಮಾಡಿದ ಇತ್ತೀಚಿನ ಪ್ರಗತಿಗಳ ಬಗ್ಗೆ ಹಾಗೂ ಏರೋಸ್ಪೇಸ್ ವಾಹನಗಳಿಗೆ ನಿರ್ಣಾಯಕ ಫ್ಲೈಟ್ ಕಂಟ್ರೋಲ್ ಸಿಸ್ಟಮ್ ವಿವರವಾಗಿ ವಿವರಿಸಿದರು.
ರಕ್ಷಣಾ ಅಪ್ಲಿಕೇಶನ್‍ಗಳು ಮತ್ತು ಸಿವಿಲ್ ಅಪ್ಲಿಕೇಶನ್‍ಗಳಲ್ಲಿ ಇತ್ತೀಚಿನ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಬೇಕು ಹಾಗೂ ಡಿಆರ್‍ಡಿಒ ಮತ್ತು ಇತರ ರಕ್ಷಣಾ ಸಂಶೋಧನಾ ಸಂಸ್ಥೆಗಳಲ್ಲಿನ ವಿಜ್ಞಾನಿಗಳು ತಂತ್ರಜ್ಞಾನ ಮತ್ತು ಅದರ ಅನ್ವಯಗಳ ನಡುವಿನ ಅಂತರವನ್ನು ರಕ್ಷಣಾ ಅಗತ್ಯತೆ ಮತ್ತು ದೇಶದ ಗಡಿಗಳನ್ನು ರಕ್ಷಿಸಲು ಸೇತುವೆಯಾಗಿ ಕೆಲಸ ಮಾಡುತ್ತಾರೆ. ದೇಶದ ರಕ್ಷಣಾ ಅವಶ್ಯಕತೆಗಳನ್ನು ಪೂರೈಸುವಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕ್ಷೇತ್ರದಲ್ಲೂ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಆರ್‍ಡಿಒದ ಮತ್ತೊಬ್ಬ ವಿಜ್ಞಾನಿ ಶ್ರೀ ರಾಜಪ್ಪ ಮೇತ್ರೆ ಅವರು ಕ್ಷಿಪಣಿ ತಂತ್ರಜ್ಞಾನ ಮತ್ತು ಏರೋ ಸ್ಪೇಸ್ ಅಪ್ಲಿಕೇಶನ್‍ಗಳ ಕ್ಷೇತ್ರದಲ್ಲಿ ಡಿಆರ್‍ಡಿಒ ಮಾಡಿದ ಕೆಲಸಗಳನ್ನು ವಿವರಿಸಿದರು. ದೇಶದ ಗಡಿಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ಶತ್ರು ಪಡೆಗಳಿಂದ ಗಡಿಯ ಒಳನುಗ್ಗುವಿಕೆಯನ್ನು ಹಿಮ್ಮೆಟ್ಟಿಸಲು ಸೇನೆ, ನೌಕಾಪಡೆ ಮತ್ತು ವಾಯುಸೇನೆ ಸೇರಿದಂತೆ ಮೂರು ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು ವಿವಿಧ ಸೇವೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಕುಲಪತಿ ಪೆÇ್ರ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಬೆಂಗಳೂರಿನ ಎನ್‍ಐಟಿಟಿಇ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪೆÇ್ರ. ಪರಮೇಶಾಚಾರಿ, ಗೋದುತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಡಾ.ಶಿವಲೀಲಾ, ಡಾ.ಸುಜಾತಾ ಮಲ್ಲಾಪುರ ಹಾಗೂ ಡಾ.ಗಜೇಂದ್ರನ್ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.