ನ್ಯೂಯಾರ್ಕ್, ಮಾ.೩೦- ಜಗತ್ತಿನ ಭವಿಷ್ಯ ಎಂದೇ ಕರೆಯಲ್ಪಡುವ ಕೃತಕ ಬುದ್ಧಿಮತ್ತೆಯು (ಎಐ) ಜಾಗತಿಕವಾಗಿ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಹಾಗೂ ಇದರಿಂದ ಮಾನವನ ಕೆಲಸ ಹೆಚ್ಚು ಸುಲಭವಾಗಿದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಸೇರಿದಂತೆ ಸಾವಿರಕ್ಕೂ ಅಧಿಕ ತಂತ್ರಜ್ಞಾನ ನಾಯಕರು ಮತ್ತು ಸಂಶೋಧಕರು ಇದೀಗ ಎಐಯ ವ್ಯಾಪಕ ಬಳಕೆಯನ್ನು ನಿಲ್ಲಿಸಬೇಕೆಂದು ಕೇಳಿಕೊಂಡಿದ್ದಾರೆ.
ಒಂದು ಸಾವಿರಕ್ಕೂ ಅಧಿಕ ತಂತ್ರಜ್ಞಾನ ನಾಯಕ ಹಾಗೂ ಸಂಶೋಧಕರು ಇದೀಗ ಎಐ ಪ್ರಕರಣದಿಂದಾಗಿ ಸಮಾಜ ಮತ್ತು ಮಾನವೀಯತೆಗೆ ಆಳವಾದ ಅಪಾಯಗಳನ್ನು ತರಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರೆದ ಪತ್ರದಲ್ಲಿ ಇದೀಗ ಕೃತಕ ಬುದ್ಧಿಮತ್ತೆ ಪ್ರಯೋಗಾಲಯಗಳನ್ನು ಹಾಗೂ ಅತ್ಯಾಧುನಿಕ ವ್ಯವಸ್ಥೆಗಳ ಅಭಿವೃದ್ಧಿಯನ್ನು ವಿರಾಮಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ. ಎಐ ಡೆವಲಪರ್‌ಗಳು ಅರ್ಥಮಾಡಿಕೊಳ್ಳಲು ಹಾಗೂ ಊಹಿಸಲು ಸಾಧ್ಯವಾಗದಂಥ ಜಗತ್ತಿನ ಶಕ್ತಿಶಾಲಿ ಕೃತಕ ಬುದ್ದಿಮತ್ತೆ ಹೊಂದಿರುವ ಉಪಕರಣಗಳನ್ನು ತಯಾರಿಸುವ ರೇಸ್‌ನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅವರು ತಯಾರಿಸುವ ಉಪಕರಣಗಳು ಮುಂದೆ ಯಾರ ನಿಯಂತ್ರಣಕ್ಕೂ ಸಿಗಲಾರದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಎಲಾನ್ ಮಸ್ಕ್ ಅಲ್ಲದೆ ಆಪಲ್ ಸಂಸ್ಥೆಯ ಸಹಸಂಸ್ಥಾಪಕ ಸ್ಟೀವ್ ವೋಝ್ನಿಯಾಕ್, ಉದ್ಯಮಿ ಆಂಡ್ರ್ಯೂ ಯಂಗ್, ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್‌ನ ಅಧ್ಯಕ್ಷ ರಾಚೆಲ್ ಬ್ರಾನ್ಸನ್ ಸೇರಿದಂತೆ ಹಲವರು ಈ ಪತ್ರದಲ್ಲಿ ಸಹಿ ಮಾಡಿದ್ದಾರೆ.
ಏನಿದು ಕೃತಕ ಬುದ್ಧಿಮತ್ತೆ?
ಇಂದು ಜಗತ್ತಿನ ಬಹುತೇಕ ವಸ್ತುಗಳು ಕೃತಕ ಬುದ್ಧಿಮತ್ತೆಯಿಂದಲೇ ನಡೆಯುತ್ತದೆ. ಚಾಲಕ ರಹಿತ ಕಾರ್‌ಗಳು ಕೂಡ ಕೃತಕ ಬುದ್ಧಿಮತ್ತೆಯ ಉಡುಗೊರೆ. ಒಟ್ಟಾಗಿ ಹೇಳಬೇಕೆಂದರೆ ಎಲೆಕ್ಟ್ರಾನಿಕ್ ಉಪಕರಣಗಳು ಸ್ವಯಂಚಾಲಿತವಾಗಿ ನಿರ್ವಹಣೆಗೊಳಪಟ್ಟರೆ ಅವುಗಳು ಎಐ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದರ್ಥ. ಎ.ಐ. ಚಾಟ್‌ಜಿಪಿಟಿ, ಮೈಕ್ರೋಸಾಫ್ಟ್‌ನ ಬಿಂಗ್ ಮತ್ತು ಗೂಗಲ್‌ನ ಬಾರ್ಡ್‌ನಂತಹ ಚಾಟ್‌ಬಾಟ್‌ಗಳಿಗೆ ಎಐ ಶಕ್ತಿ ನೀಡುತ್ತದೆ. ಈ ಮೂಲಕ ಇವು ಮಾನವೀಯ ಸಂಭಾಷಣೆಗಳನ್ನು ನಿರ್ವಹಿಸುತ್ತದೆ. ಅಂತ್ಯವಿಲ್ಲದ ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ರಚಿಸುತ್ತದೆ ಮತ್ತು ಕಂಪ್ಯೂಟರ್ ಕೋಡ್ ಬರೆಯುವಂತಹ ಹೆಚ್ಚು ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುತ್ತದೆ. ಆದರೆ ಮುಂದಿನ ದಿನಗಳಲ್ಲಿ ಎಐ ಅಭಿವೃದ್ಧಿ ಹೊಂದಿದಂತೆ ಉಪಕರಣಗಳು ಮಾನವನ ನಿಯಂತ್ರಣಕ್ಕೆ ಸಿಗದೆ, ಮಾನವ ಕುಲಕ್ಕೆ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕೂಡ ಇದೆ ಎಂದು ಅಂದಾಜಿಸಲಾಗಿದೆ.