
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಆ.09 : ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಆರಂಭವಾಗಲಿರುವ ಶಿಶು ಪೋಷಕ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಒಂದು ವಾರದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.
ತಾ.ಪಂ. ಮಲ್ಲಿಗೆ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರ ಉದ್ಘಾಟಿಸಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಪ್ರಕಾಶ್ ಮಾತನಾಡಿ, ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆರಂಭವಾಗಲಿರುವ ‘ಕೂಸಿನ ಮನೆ’ಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ತಮ್ಮ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ತಮ್ಮ ಕೆಲಸ ಕಾರ್ಯಗಳಿಗೆ ತೆರಳಬಹುದಾಗಿದೆ. ಕೂಸಿನ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು ಶಿಶು ಪಾಲಕರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಒಂದು ವಾರ ಕಾಲ ಸೂಕ್ತ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯ ಪ್ರಯೋಜನ ಪಡೆದುಕೊಂಡು ಶಿಶು ಪಾಲನಾ ಕೇಂದ್ರವನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಕರೆ ನೀಡಿದರು.
ನರೇಗಾ ಸಹಾಯಕ ನಿರ್ದೇಶಕ ಹೇಮಾದ್ರಿನಾಯ್ಕ ಮಾತನಾಡಿ, ನರೇಗಾ ಕೂಲಿ ಕೆಲಸ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ತೆರಳುವ ಗ್ರಾಮೀಣ ಮಹಿಳೆಯರು ಶಿಶುಪಾಲನಾ ಕೇಂದ್ರದ ಅನುಕೂಲ ಪಡೆಯಬಹುದಾಗಿದೆ. ಕೂಸಿನ ಮನೆಯಲ್ಲಿ ಬಿಟ್ಟು ಹೋಗುವ ಮಕ್ಕಳನ್ನು ಆಹಾರ ನೀಡುವುದು ಸೇರಿದಂತೆ ತಾಯಿ ಬರುವವರೆಗೂ ಸಂತೈಸುವ ಜವಾಬ್ದಾರಿ ಶಿಶು ಪಾಲಕರಿಗೆ ಇರುತ್ತದೆ. ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳಲು ಇಲಾಖೆ ಅಗತ್ಯ ತರಬೇತಿ ನೀಡುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ಅಧಿಕಾರಿ ಹರೀಶ, ಸಿಡಿಪಿಒ ಅವಿನಾಶ, ಅಂಗನವಾಡಿ ಮೇಲ್ವಿಚಾರಕಿ ರತ್ನಮ್ಮ ಇದ್ದರು. ತಾಂತ್ರಿಕ ಸಂಯೋಜಕ ಪ್ರಕಾಶನಾಯ್ಕ ನಿರ್ವಹಿಸಿದರು.