ಕೂಲಿ ಮಹಿಳೆಯರಿಬ್ಬರ ಹತ್ಯೆ: 24 ಗಂಟೆಗಳಲ್ಲಿ ಕೊಲೆಗಾರರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಏ.8: ಮೂಲತ: ಜಿಲ್ಲೆಯ ಆಳಂದ್ ತಾಲ್ಲೂಕಿನ ಕೇರಿಅಂಬಲಗಾ ಗ್ರಾಮದ ಕೂಲಿ ಕಾರ್ಮಿಕರಾದ ಶ್ರೀಮತಿ ಶರಣಮ್ಮ ಗಂಡ ಅಣ್ಣಪ್ಪ ಗಡದನ್ ಹಾಗೂ ಶ್ರೀಮತಿ ಚಂದಮ್ಮ ಗಂಡ ಬಾಬುರಾವ್ ಅವರಿಗೆ ನಗರದ ತಾವರಗೇರಾದ ಹೊಲದಲ್ಲಿ ನಿಗೂಢ ರೀತಿಯಲ್ಲಿ ಹತ್ಯೆ ಮಾಡಲಾಗಿದ್ದು, ಪ್ರಕರಣದ ಆರೋಪಿಗಳನ್ನು 24 ಗಂಟೆಗಳಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿ ಸೋಮವಾರ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕರ್ತರು ನಗರ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ಕಳೆದ 7ರಂದು ಬೆಳಿಗ್ಗೆ 8-30ಕ್ಕೆ ತಮ್ಮ ಊರಿನಿಂದ ಮಿಜಗುರಿ ನಾಕಾಕ್ಕೆ ಕೂಲಿ ಕೆಲಸಕ್ಕೆಂದು ಶ್ರೀಮತಿ ಶರಣಮ್ಮ ಮತ್ತು ಶ್ರೀಮತಿ ಚಂದಮ್ಮ ಅವರು ಬಂದಿದ್ದು, ಅವರ ಮೃತದೇಹಗಳು ತಾವರಗೇರಾ ಹೊಲದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಕಾರಣ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಡವರಿಗೂ ಒಂದೇ ನ್ಯಾಯ, ಶ್ರೀಮಂತರಿಗೂ ಒಂದೇ ನ್ಯಾಯ ಆಗಬೇಕು. 24 ಗಂಟೆಗಳ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ಕೂಲಿ ನಾಲಿ ಬಿಟ್ಟು ಕೂಲಿ ಕಾರ್ಮಿಕರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಆರೋಪಿಗಳನ್ನು ಬಂಧಿಸುವುದಾಗಿ ಮಹಿಳಾ ಪೋಲಿಸ್ ಅಧಿಕಾರಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಭೀಮರಾಯ್ ಎಂ. ಕಂದಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಾಂತೇಶ್ ದೊಡ್ಡಮನಿ, ಮರೆಪ್ಪ ಎಚ್. ರೊಟ್ಟನಡಗಿ, ರಾಜು ಜಮಾದಾರ್, ಶಿವಕುಮಾರ್ ಬೆಳಗೇರಿ, ದೇವಿಂದ್ರ ಉಳ್ಳಾಗಡ್ಡಿ, ಶರಣು ಬಳಚಕ್ರ, ಚಂದ್ರಕಾಂತ್ ತುಪ್ಪದನವರ್, ಮಲ್ಲು ಬೊಳೆವಾಡ್, ಬಾಬುರಾವ್ ದೇವರಮನಿ, ಅಣ್ಣಯ್ಯ ಗುತ್ತೇದಾರ್, ಮುತ್ತಣ್ಣ ಗುತ್ತೇದಾರ್ ಮುಂತಾದವರು ಪಾಲ್ಗೊಂಡಿದ್ದರು.