ಕೂಲಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ

ಧಾರವಾಡ, ಸೆ 21: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.

ಸರ್ಕಾರಗಳು ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಕೂಡಲೇ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕುಟುಂಬ ಸದಸ್ಯರಿಗೆ 200 ದಿನಗಳ ಕೆಲಸ ನೀಡಬೇಕು, ಕೆಲಸ ನಿರ್ವಹಣೆ ಮಾಡಲು ಸಾಮಾಗ್ರಿಗಳ ಪೂರೈಕೆ ಮಾಡಬೇಕು, ಕೆಲಸ ನಿರ್ವಹಣೆ ಮಾಡುವ ಸ್ಥಳದ ದೂರದ ಆಧಾರದ ಮೇಲೆ ಶೇ.10 ರಷ್ಟು ಕೂಲಿ ಹಣ ಹೆಚ್ಚಿಸಬೇಕು ಹಾಗೂ ಕೂಲಿ ಮಾಡಿದ 15 ದಿನಗಳ ಒಳಗಾಗಿ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿಂಗಪ್ಪ ಹಂಚಿನಮನಿ, ನಾಗಪ್ಪ, ಉಳವಪ್ಪ ಕೆರೋಬಿ, ಬಂಗಾರವ್ವ, ಚೆನ್ನಪ್ಪ ಸೇರಿದಂತೆ ಹಲವರು ಇದ್ದರು.