ಕೂಲಿ ಕಾರ್ಮಿಕರಿಗೆ ಪಲ್ಸ್ ಆಕ್ಸಿಮೀಟರ್ ವಿತರಣೆ

ಕಲಬುರಗಿ,ಮೇ.26-ತಾಲ್ಲೂಕಿನ ನಂದಿಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕೆಲಸ ಮಾಡುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಪಲ್ಸ್ ಆಕ್ಸಿಮೀಟರ್, ಥರ್ಮೋ ಮೀಟರ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಔಷಧಿ ವಿತರಣೆ ಮಾಡಲಾಯಿತು.
ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಕೂಲಿ ಕಾರ್ಮಿಕರಿಗೆ ಪಲ್ಸ್ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ಮತ್ತು ಔಷಧಿ ವಿತರಣೆಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು..
ಈ ಹಿನ್ನೆಲೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಅಭಿವೃದ್ಧಿ ಅಧಿಕಾರಿ ಸಂದೀಪ ಗುತ್ತೇದಾರ ಅವರು ತಾಲ್ಲೂಕ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರ ಕೂಲಿ ಕಾರ್ಮಿಕರಿಗೆ ಪಲ್ಸ್ ಆಕ್ಸಮೀಟರ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು ಪಿಡಿಓ ಅವರನ್ನು ಅಭಿನಂದಿಸಿದ ತಾ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಬಡ ಕೂಲಿ ಕಾರ್ಮಿಕರಿಗೆ ಜಿಲ್ಲೆಯ ಎನ್.ಜಿ.ಓ.ಗಳು ಮತ್ತು ಶ್ರೀಮಂತರು ಫುಡ್ ಕಿಟ್ ವಿತರಣೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು. ಗ್ರಾ.ಪಂ.ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರು ಮಾತನಾಡಿ, ಕೋವಿಡ್ ಸಂಕಷ್ಟದ ಕಾಲದಲ್ಲೂ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯತಿ ವತಿಯಿಂದ ಅಗತ್ಯ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಎ.ಡಿ.ಶಿವಂಶಂಕ್ರಯ್ಯ ಸ್ವಾಮಿ, ಸದಸ್ಯರಾದ ಭೀಮಾಶಂಕರ ನಾಗನಳ್ಳಿ, ಕುಪೇಂದ್ರ ನಾಗನಳ್ಳಿ, ಶರಣಪ್ಪ ನಾಗನಳ್ಳಿ, ದಿನೇಶ ದೊಡ್ಡಮನಿ, ಶಿವಪುತ್ರ ನಾಗನಳ್ಳಿ ಅವರು ಉಪಸ್ಥಿತರಿದ್ದರು.