ಕೂಲಿ ಕಾರ್ಮಿಕರಿಗೆ ಆಸರೆಯಾದ ಉದ್ಯೋಗ

ಗಬ್ಬೂರು.ಜೂ.೪-ಜಗತ್ತಿನಾದ್ಯಂತ ಜನರ ನೆಮ್ಮದಿಯ ನಿದ್ದೆಗೆಡಿಸಿದ ಕೊರೋನಾ ಮಹಾಮಾರಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಘೋಷಿಸಿದ ಲಾಕ್ ಡೌನ್ ನಿಂದ ಒಪ್ಪತ್ತಿನ ಊಟ ಸಿಗದೆ ತತ್ತರಿಸಿರುವ ಬಡ ಕೂಲಿ ಕಾರ್ಮಿಕರ ಬದುಕಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಗೆ ಬರುವ ಹೊನ್ನಕಾಟಮಳ್ಳಿ ಗ್ರಾಮದ ಕೂಲಿ ಕಾರ್ಮಿಕರೆಲ್ಲರೂ ಉದ್ಯೋಗ ಖಾತ್ರಿ ಕೆಲಸದಲ್ಲಿ ನಿರತರಾಗಿದ್ದು ಸಂತಸದಿಂದ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿಯ ಎರಡನೇ ಅಲೆ ಎಲ್ಲೆಡೆ ಕರಾಳ ಹಸ್ತ ಚಾಚಿದ್ದು, ಸಾವಿರಾರು ಜನರು ಬಲಿಯಾಗಿದ್ದು.ಬಡ ಕೂಲಿ ಕಾರ್ಮಿಕರ ಕುಟುಂಬಗಳ ದೈನಂದಿನ ಜೀವನಕ್ಕೆ ಕೊಳ್ಳಿ ಇಡುವ ಮೂಲಕ ಸುಮಾರು ಒಂದು ತಿಂಗಳಿನಿಂದ ಕಾರ್ಮಿಕರಿಗೆ ಕೆಲಸವಿಲ್ಲದೇ ಕೂರುವಂತಾಗಿತ್ತು.ಕಾರ್ಮಿಕರಿಗೆ ಉದ್ಯೋಗ: ಒಂದು ಕಡೆ ಕೊರೋನಾ ಆತಂಕದಿಂದ ಮನೆಯಿಂದ ಹೊರಬರುವಂತಿಲ್ಲ, ಇನ್ನೊಂದೆಡೆ ಎಲ್ಲೂ ಕೆಲಸ ಸಿಗದಿರುವುದರಿಂದ ಗ್ರಾಮೀಣ ಬಡ ಕುಟುಂಬಗಳು ತೊಂದರೆಗೆ ಸಿಲುಕುವಂತಾಗಿದೆ. ಈಗ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಮುಂಜಾಗ್ರತೆ ಕ್ರಮ ಅನುಸರಿಸುವ ಮೂಲಕ ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಗೆ ಬರುವ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ಗೋಕಟ್ಟೆ ನಿರ್ಮಾಣ, ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ, ಕಲ್ಯಾಣಿ ಸ್ವಚ್ಚತಾ ಕೆಲಸಗಳು ನಡೆತ್ತಿದ್ದು ನೂರಾರು ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊತ್ತಿಕೊಳ್ಳಲಾಗಿದೆ. ಇದರಿಂದ ಜನರಿಗೆ ಕೂಲಿ ಸಿಗುವಂತಾಗಿದೆ ಎಂದು ಕೊತ್ತದೊಡ್ಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾದ ಅಶೋಕ, ಇಂಜಿನಿಯರ್ ಗುಡದಪ್ಪ,ಗ್ರಾಪಂ ಸದಸ್ಯ ಆಂಜನೇಯ ನಾಯಕ ಹೊನ್ನಕಾಟಮಳ್ಳಿ, ಕಂಪ್ಯೂಟರ್ ಆಪರೇಟರ್ ವೆಂಕಟೇಶ ತಿಳಿಸಿದರು.