ಕೂಲಿಕಾರ್ಮಿಕರಿಗೆ ಮತದಾನದ ಜಾಗೃತಿ

ಗುಳೇದಗುಡ್ಡ,ಏ12: ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಮತದಾರನ ಹಕ್ಕು ಹಾಗೂ ಕರ್ತವ್ಯವಾಗಿದ್ದು, ದೇಶದ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಮತದಾರರು ಯಾವುದೇ ಆಸೆ ಆಮಿಷಗಳಿಗೆ ಮರುಳಾಗದೇ ಯೋಚಿಸಿ ಮತದಾನ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ಕಟಗೇರಿ ಗ್ರಾಪಂ ವ್ಯಾಪ್ತಿಯ ನಾಲಾ ಹೂಳೆತ್ತುವ ಕಾಮಗಾರಿ, ಕೊಟಿಕಲ್ಲ ಗ್ರಾಪಂ ವ್ಯಾಪ್ತಿಯ ತೋಗುಣಶಿ ಗ್ರಾಮದ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ, ಕೆಂದೂರ ಕೆರೆಯಲ್ಲಿ ಮಂಗಳಗುಡ್ಡ ಮತ್ತು ಹಳದೂರ ಗ್ರಾಪಂ ಕೂಲಿಕಾರ್ಮಿಕರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಮಾಡಿ ಕೂಲಿಕಾರ್ಮಿಕರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿ, ನರೇಗಾ ಕೂಲಿಕಾರ್ಮಿಕರ ಕೂಲಿ ಮೊತ್ತವನ್ನು ಸರ್ಕಾರ 349ರೂ ಗೆ ಹೆಚ್ಚಿಸಿರುವುದಾಗಿ ತಿಳಿಸಿದರು. ಮತದಾನ ಜಾಗೃತಿಯ ಕರ ಪತ್ರಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಮಂಗಳಾ ಎಂ, ತಾಪಂ ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ, ಪಿಡಿಓ ಆರತಿ ಕ್ಷತ್ರಿ ಹಾಗೂ ಸಿಬ್ಬಂದಿ ಇದ್ದರು.