
ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.19: ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳಿಗಾರಊಟಿ ಕೆರೆಯಲ್ಲಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಉದ್ಯೋಗ ಖಾತರಿ ಯೋಜನೆ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ಪಂಚಾಯತ್ ಅಮೃತ ಅಭಿಯಾನ (GPAAA) ಗುಲ್ಬರ್ಗ ವಿಭಾಗದ ವಲಯ ಮುಖ್ಯಸ್ಥರಾದ ಸುರೇಶ್ ಮಹಾದೇವಪ್ಪ ಮಾತನಾಡಿ, ಬಡಕೂಲಿಕಾರರಿಗೆ ಆರ್ಥಿಕ ವೆಚ್ಚ ತಗ್ಗಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತಿದೆ. ಬಿ.ಪಿ, ಶಗುರ್, ಕ್ಷಯರೋಗ ಸೇರಿ ಇತರೆ ಆರೋಗ್ಯ ತಪಾಸಣೆ ಮಾಡಲಾಗುವುದು. ಕೂಲಿಕಾರರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಏನಾದರೂ ರೋಗಗಳು ಇದ್ದರೆ ಮೂಂಚೂಣಿಯಾಗಿ ಚಿಕಿತ್ಸೆ ಪಡೆಯಲು ಸಹಕಾರಿ ಆಗುತ್ತದೆ. ಕೂಲಿಕಾರರು ಆರೋಗ್ಯ ತಪಾಸಣೆಗೆ ಯಾವುದೇ ಹಿಂಜರಿಕೆ ಮಾಡಬಾರದು. ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಕೊಳ್ಳಲು ಮುಂದೆ ಬರಬೇಕು. ಸರಕಾರ ಕಲ್ಪಿಸಿರುವ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಆರೋಗ್ಯ ಶಿಬಿರದಲ್ಲಿ ಒಟ್ಟು 110 ಜನರು ಆರೋಗ್ಯ ತಪಾಸಣೆ ಮಾಡಿಕೊಂಡರು. ಈ ವೇಳೆ ನರೇಗಾ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿವಸ್ ಆಚರಣೆ ಮಾಡಿ ಕೂಲಿಕಾರರಿಗೆ ನರೇಗಾ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಮೃತ ಅಭಿಯಾನ (GPAAA) ರಾಜ್ಯ ಮಟ್ಟದ ಕಾರ್ಯಕ್ರಮದ ಬೆಂಬಲ ಅಧಿಕಾರಿಗಳಾದ ಎಲಿಜಿಬತ್, GPAAA ತಾಲೂಕು ಸಂಯೋಜಕರಾದ ಶರಣಬಸವ, ನರೇಗಾ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಕಾರ್ಯದರ್ಶಿ ಸುಶೀಲಾಬಾಯಿ, ಆನೆಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಲಾರೆನ್ಸ್, ತಾಪಂ ಸಿಬ್ಬಂದಿ ಹನುಮೇಶ, ಗ್ರಾಪಂ ಸಿಬ್ಬಂದಿಗಳಾದ ಮಲಿಯಪ್ಪ, ಯಶೋಧಾ, ದೇವಜಾನಾಯ್ಕ ಹಾಗೂ ಗ್ರಾ.ಪಂ. ಸದಸ್ಯರು ಇದ್ದರು.