ಕೂಲಹಳ್ಳಿ ಗ್ರಾಮದಲ್ಲಿ ಸ್ವೀಪ್ ಕಾರ್ಯಕ್ರಮದ ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.03 : ಮತದಾನ ಮಾಡುವುದು ಎಲ್ಲರ ಹಕ್ಕು ಆಗಿರುವುದರಿಂದ, ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಸಹಾಯಕ ಚುನಾವಣಾ ಅಧಿಕಾರಿಯೂ ಆದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್ ಕರೆ ನೀಡಿದರು.
ತಾಲೂಕಿನ ಕೂಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಹಳ್ಳಿ ಗ್ರಾಮದ ಗೋಣಿ ಬಸವೇಶ್ವರ ಜಾತ್ರೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಭಾರತ ದೇಶವು ಇಡೀ ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಆದರೆ, ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಸಾಕಷ್ಟು ವಿದ್ಯಾವಂತರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ. ಈ ಬಗ್ಗೆ ವರದಿಗಳು ಬರುತ್ತಲೇ ಇವೆ. ಆದ್ದರಿಂದ 18 ವರ್ಷ ಮೇಲ್ಪಟ್ಟ ಯುವಜನತೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಹಾಗೂ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ತಿಳಿಸಿದರು.
2023 ಸಾಲಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾರರ ನೋಂದಣಿ ಕಾರ್ಯ ಹಾಗೂ ಕಡ್ಡಾಯ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನೂ ಈಗಾಗಲೇ ತಾಲೂಕಾದ್ಯಂತ ಸ್ವೀಪ್ ಕಾರ್ಯಕ್ರಮಗಳು ನಡೆಯುತ್ತಿದೆ. ಅದರಲ್ಲೂ ಜಾತ್ರೆ, ಉತ್ಸವ, ಶಾಲಾ-ಕಾಲೇಜು, ನರೇಗಾ ಕಾಮಗಾರಿ ಸ್ಥಳಗಳಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತವೆ. ಇದರಿಂದ ಮತದಾರರ ನೋಂದಣಿ ಕಾರ್ಯ ಬಹಳ ಶೀಘ್ರವಾಗಿ ಆಗಬೇಕಿದೆ. ಈ ಬಗ್ಗೆ ಜಾಗೃತಿ ಕಾರ್ಯವೂ ಎಲ್ಲಡೆ ನಡೆಯುತ್ತಿದೆ ಎಂದು ತಿಳಿಸಿದರು.
ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಮಾತನಾಡಿ, ಈಗಾಗಲೇ ಜಿಪಂನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಕೆಲ ಗ್ರಾಪಂಗಳ ಮುಂಭಾಗ ಬ್ಯಾನರ್ ಅಳವಡಿಸಿಲ್ಲ. ಅಂತಹ ಗ್ರಾಪಂ ಪಿಡಿಒಗಳಿಗೆ ಕಟ್ಟನಿಟ್ಟಿನ ಆದೇಶ ನೀಡಲಾಗಿದೆ. ಮತದಾರರ ನೋಂದಣಿ, ಮತದಾನದ ಜಾಗೃತಿ ಕಾರ್ಯ ನಿರಂತರ ಆಗಬೇಕಿದೆ. ಇನ್ನೂ 18 ವರ್ಷ ಆದ ಎಲ್ಲ ಯುವಜನತೆ ಮೊಬೈಲ್‍ನಲ್ಲೇ ವೋಟರ್ ಐಡಿ ಪಡೆಯಲು ಅವಕಾಶ ಇದೆ. ಪ್ಲೇಸ್ಟೋರ್‍ನಲ್ಲಿ “ವೋಟರ್ ಹೆಲ್ಪ್ಲೈನ್” ಎಂಬ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಪೂರಕ ಮಾಹಿತಿ ನೀಡಿದರೆ ತಿಂಗಳೊಳಗೆ ನಿಮ್ಮ ಕೈಗೆ ವೋಟರ್ ಐಡಿ ಸಿಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಐಇಸಿ ಸಂಯೋಜಕ ಫಾಜಿಲ್ ಅಹಮ್ಮದ್, ಹರಪನಹಳ್ಳಿ ತಾಪಂನ ವ್ಯವಸ್ಥಾಪಕ ದಾದಾಪೀರ್, ಗ್ರಾಪಂ ಪಿಡಿಒ ಯಮುನನಾಯ್ಕ, ಟಿಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರ ಮಲ್ಲಿಕಾರ್ಜುನ್ ಪೂಜಾರ್, ಎನ್‍ಆರ್‍ಎಲ್‍ಎಂನ ಸಿಎಸ್, ಟಿಪಿಎಂ, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಪಂ ಹಾಗೂ ತಾಪಂ ಸಿಬ್ಬಂದಿ, ಬಿಎಫ್ಟಿಗಳು, ಗ್ರಾಮ ಕಾಯಕ ಮಿತ್ರರು, ತಾಂಡಾ ರೋಜಗಾರ್ ಮಿತ್ರರು, ಸ್ವಸಹಾಯ ಸಂಘದ ಸದಸ್ಯರು ಹಾಜರಾಗಿದ್ದರು.
ಹರಪನಹಳ್ಳಿ ತಾಲೂಕಿನಲ್ಲಿ ನಡೆಯುವ ಎಲ್ಲ ಜಾತ್ರೆ, ಉತ್ಸವಗಳಲ್ಲಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲೂ 18 ವರ್ಷ ಆದ ಎಲ್ಲ ಯುವಜನರು ಗುರುತಿನ ಚೀಟಿ ಪಡೆಯಲು ಅಗತ್ಯ ಕ್ರಮಕೈಗೊಳ್ಳಲು ಸಂಬಂಧಿಸಿದ ಸಿಬ್ಬಂದಿಗೆ ಸೂಚಿಸಲಾಗಿದೆ. ಇತರೆಡೆಗಿಂತ ನಮ್ಮ ತಾಲೂಕಿನಲ್ಲಿ ಸ್ವೀಪ್ ಕಾರ್ಯಕ್ರಮ ಬಹಳ ಅರ್ಥಪೂರ್ಣ ಆಚರಿಸಲಾಗುವುದು.

ಕೆ.ಆರ್.ಪ್ರಕಾಶ್, ಸಹಾಯಕ ಚುನಾವಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಹರಪನಹಳ್ಳಿ