ಕೂಲಹಳ್ಳಿ ಗೋಣಿಬಸವೇಶ್ವರ ಸ್ವಾಮಿ ರಥೋತ್ಸವ

ಹರಪನಹಳ್ಳಿ ಮಾ 26 : ತಾಲ್ಲೂಕಿನ ಕೂಲಹಳ್ಳಿಯ ಗೋಣಿಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ವಿಶಾಲ ಮೈದಾನದಲ್ಲಿದ್ದ ಆಕರ್ಷಕ ರಥಕ್ಕೆ ಬಣ್ಣದ ಬಾವುಟ, ಹಲವು ದೇವಾನು ದೇವತೆಗಳ ಭಾವಚಿತ್ರ ಹಾಕಲಾಗಿತ್ತು. ಪುಷ್ಪಮಾಲೆಗಳಿಂದ ರಥವನ್ನು ಅಲಂಕರಿಸಲಾಗಿತ್ತು. ಗೋಣಿಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪಟ್ಟದ ಚಿನ್ಮಯ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕೊಟ್ಟೂರೇಶ್ವರ ದೇವಸ್ಥಾನಕ್ಕೆ ತೆರಳಲಾಯಿತು. ಅಲ್ಲಿ ಪೂಜೆ ಸಲ್ಲಿಸಿದ ನಂತರ ಕೊಟ್ಟೂರೇಶ್ವರರ ಅಲಂಕೃತ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಚಿನ್ಮಯ ಸ್ವಾಮೀಜಿ ಅವರು ರಥದ ಮೈದಾನಕ್ಕೆ ಆಗಮಿಸಿದರು. ರಥವನ್ನು ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು.
ಗೋಣಿಬಸವೇಶ್ವರರ ಮುಕ್ತಿ ಬಾವುಟವನ್ನು ಬಹಿರಂಗವಾಗಿ ಹರಾಜು ಹಾಕಲಾಯಿತು. ಮುಂಡರಗಿ ತಾಲ್ಲೂಕಿನ ಪೇಟಲೂರು ಗ್ರಾಮದ ಶರಣಪ್ಪ ಅವರಿಗೆ 1.85 ಲಕ್ಷರೂಗೆ ಬಾವುಟವನ್ನು ಹರಾಜಿನಲ್ಲಿ ಪಡೆದರು. ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುತ್ತಿದ್ದಂತೆಯೇ ಅರ್ಚಕರ ವೇದ ಘೋಷದೊಂದಿಗೆ ಮಹಾ ಮಂಗಳಾರತಿ ನೆರವೇರಿತು. ನೆರೆದ ಸಹಸ್ರಾರು ಭಕ್ತರ ಜಯ ಘೋಷಗಳ ನಡುವೆ ರಥೋತ್ಸವಕ್ಕೆ ಉತ್ತರಾಭಿಮುಖವಾಗಿ ಚಾಲನೆ ನೀಡಲಾಯಿತು. ಹರಕೆ ಹೊತ್ತಿದ್ದ ಭಕ್ತರು ರಥಕ್ಕೆ ತೆಂಗಿನಕಾಯಿ ಹೊಡೆದು, ಬಾಳೆಹಣ್ಣು ತೂರಿ ಹರಕೆ ಸಮರ್ಪಿಸಿದರು.
ಭಕ್ತರು ಬೆಳಿಗ್ಗೆಯಿಂದಲೇ ದೇವರಿಗೆ ಪೂಜೆ ಸಲ್ಲಿಸಿದರು. ಮಠದ ಆವರಣದಲ್ಲಿರುವ ಮದ್ದಾನೇಶ್ವರ ದೇವಾಲಯದಲ್ಲಿನ ಗುಹೆಯಲ್ಲಿರುವ ಪಾತಾಳ ಗಂಗಮ್ಮ ಬಾವಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ ಮಹಿಳೆಯರು ಪೂಜೆ ಸಲ್ಲಿಸಿ ನೀರು ಸೇವಿಸಿದರು. ಮಕ್ಕಳಾಗದವರು ಇಲ್ಲಿನ ನೀರು ಸೇವಿಸಿದರೇ ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.