೧. ಮೆಂತ್ಯದ ಸೊಪ್ಪನ್ನು ಎಳನೀರಿನೊಂದಿಗೆ ಸೇರಿಸಿ ರುಬ್ಬಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ತಲೆ ಸ್ನಾನ ಮಾಡಿ ಕೂದಲು ಸೊಂಪಾಗಿ ಬೆಳೆಯುತ್ತದೆ.
೨. ತಲೆಹೊಟ್ಟು ನಿವಾರಣೆಗೆ: ಉಪಯೋಗಿಸಿದ ನಿಂಬೆಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಅದನ್ನು ಸೀಗೆಪುಡಿ ಜೊತೆ ಮಿಶ್ರ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಹೊಟ್ಟು ಆಗುವುದು ಕ್ರಮೇಣ ಕಡಿಮೆಯಾಗುತ್ತದೆ.
೩. ಎಲಚಿ ಎಲೆ ಹಾಗೂ ಬೆಟ್ಟದ ನೆಲ್ಲಿಕಾಯಿ ಎರಡನ್ನೂ ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
೪. ಎಲಚಿ ಎಲೆ ಹಾಗೂ ಎಳ್ಳಿನ ಗಿಡದ ಎಲೆ ಎರಡನ್ನೂ ರುಬ್ಬಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಕಪ್ಪಾಗಿಯೂ, ಸೊಂಪಾಗಿಯೂ ಬೆಳೆಯುತ್ತದೆ.
೫. ದಂಟಿನ ಸೊಪ್ಪನ್ನು ನುಣ್ಣಗೆ ಅರೆದು ತಲೆಯ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತಲೆ ಸ್ವಚ್ಛಗೊಳಿಸಿ (ವಾರಕ್ಕೆ ಒಮ್ಮೆ).
೬. ಕೊಬ್ಬರಿ ಎಣ್ಣೆ ೧೦೦ ಗ್ರಾಂ ಒಲೆಯ ಮೇಲಿಡಿ. ೮ – ೧೦ ಕರಿಕಾಳುಮೆಣಸು ಸ್ವಲ್ಪ ಜಜ್ಜಿ ಎಣ್ಣೆಗೆ ಹಾಕಿ. ಅರ್ಧ ಈರುಳ್ಳಿ ಸಣ್ಣಗೆ ಹೆಚ್ಚಿ ಅದಕ್ಕೆ ಹಾಕಿ. ೧೦ – ೧೨ ಕರಿಬೇವಿನ ಎಲೆಯನ್ನು ಅದಕ್ಕೆ ಹಾಕಿ. ೫ ನಿಮಿಷಗಳ ಕಾಲ ಕುದಿಸಿ ನಂತರ, ಶೋಧಿಸಿ ತೆಗೆದಿಟ್ಟುಕೊಳ್ಳಿ. ಇದನ್ನು ದಿನನಿತ್ಯದಲ್ಲಿ ಕೂದಲಿಗೆ ಹಚ್ಚುತ್ತಾ ಬಂದರೆ, ಕೂದಲು ಉದುರುವುದು ನಿಲ್ಲುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ದೀರ್ಘಕಾಲದವರೆಗೆ ಕಪ್ಪಾಗಿ ಇರುತ್ತದೆ. ಇದು ಪರೀಕ್ಷಿಸಲ್ಪಟ್ಟಿದೆ.
೭. ಬೂದುಗುಂಬಳಕಾಯಿಯ ಸಿಪ್ಪೆಯನ್ನು ಚೆನ್ನಾಗಿ ತೊಳೆದು ರುಬ್ಬಿಕೊಂಡು ಅದನ್ನು ಎಣ್ಣೆಗೆ ಹಾಕಿ ಕುದಿಸಿ, ಶೋಧಿಸಿ. ಅದನ್ನು ತಲೆಗೆ ಹಚ್ಚಿಕೊಳ್ಳುತ್ತಾ ಬಂದರೆ ಕೂದಲು ಸಮೃದ್ಧಿಯಾಗಿ ಬೆಳೆಯುತ್ತದೆ.
೮. ಬಿಲ್ವಪತ್ರೆಯ ಕಾಯಿಯನ್ನು ತಂದು ಅದರ ಒಳಗಿನ ತಿರುಳನ್ನು ಬೇಯಿಸಿ ಚೆನ್ನಾಗಿ ಕಿವುಚಿಕೊಂಡು ನಾರನ್ನೆಲ್ಲಾ ತೆಗೆದು ಅದರ ತಿರುಳನ್ನು ತಲೆಯ ಬುಡಕ್ಕೆ ಹಚ್ಚಿ ೨೦ ನಿಮಿಷದ ನಂತರ ಸ್ನಾನ ಮಾಡಿದರೆ, ಕೂದಲು ಚೆನ್ನಾಗಿ ಬೆಳೆಯುತ್ತದೆ. ಹೊಟ್ಟು ಉದುರುವುದು ಕಡಿಮೆಯಾಗುತ್ತದೆ.
೯. ಕಿರುಕಸಾಲೆ ಸೊಪ್ಪನ್ನು ಸುಟ್ಟು ಅದರ ಬೂದಿಯನ್ನು ನೀರಿನಲ್ಲಿಕಲಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
೧೦. ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಿ ತಲೆಯ ಬುಡಕ್ಕೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ತಲೆ ಸ್ವಚ್ಛಗೊಳಿಸಿಕೊಳ್ಳಿ. ಕೂದಲು ಸೊಂಪಾಗಿ ಬೆಳೆಯುತ್ತದೆ.
೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.