ಕೂಡ್ಲಿಗಿ : ಹಣತೆ,ಹೂ ಕೊಳ್ಳಲು ಮುಗಿಬಿದ್ದ ಜನತೆ – ಗಗನಕ್ಕೇರಿದ ಹೂವಿನ ಬೆಲೆ

ಕೂಡ್ಲಿಗಿ.ನ.15:- ಪಟ್ಟಣದಲ್ಲಿ ದೀಪಾವಳಿಯ ಸಡಗರ ಶನಿವಾರ ಬೆಳಿಗ್ಗೆಯಿಂದಲೇ ಜೋರಾಗಿಯೇ ಸಾಗಿತು. ಪಟ್ಟಣ ಸೇರಿದಂತೆ ಹಳ್ಳಿಗಳಿಂದ ಬಂದ ಜನತೆ ದೀಪಾವಳಿ ಹಬ್ಬಕ್ಕೆ ಹೂ, ಹಣತೆ, ಬಾಳೆದಿಂಡುಗಳನ್ನು ಕೊಳ್ಳಲು ಮುಗಿಬಿದ್ದರು. ವ್ಯಾಪಾರಿಗಳು ಖುಷಿಯಿಂದಲೇ ಗ್ರಾಹಕರೊಂದಿಗೆ ವ್ಯವಹಾರ ನಡೆಸಿದರು.
ನೂರು ರೂಪಾಯಿಗೆ ಒಂದು ಮಾರು ಸೇವಂತಿಗೆ ಹೂವನ್ನು ಗ್ರಾಹಕರು ಖರೀದಿಸಿದರು. ಮಲ್ಲಿಗೆ, ಕಾಕಡವಂತೂ ನೂರು ರೂಪಾಯಿ ಮೀರಿತ್ತು ಈಗಾಗಿ ಬೆಲೆ ಗಗನಕ್ಕೇರಿದರೂ ಹಬ್ಬಕ್ಕೆ ಜನತೆ ಕೊಳ್ಳಲೇಬೇಕಾಯಿತು. ತರಕಾರಿ ಸೇರಿದಂತೆ ಹಬ್ಬದ ಸಾಮಾಗ್ರಿಗಳು ಈ ಬಾರಿ ದುಬಾರಿಯಾಗಿದ್ದರೂ ಗ್ರಾಹಕರಿಗೆ ಮಾತ್ರ ಕೊರತೆ ಇರಲಿಲ್ಲ. ಮಣ್ಣಿನ ಹಣತೆಯನ್ನು ಕೊಳ್ಳಲು ಜನತೆ ಮುಂದಾಗಿದ್ದರಿಂದ ಕುಂಬಾರರು ತಾವು ತಯಾರಿಸಿದ ಮಣ್ಣಿನ ಹಣತೆಗೆ ಬೆಲೆ ಬಂದಿದ್ದರಿಂದ ಹಣತೆ ತಯಾರಕರು ಸಂತಸದಿಂದ ವ್ಯಾಪಾರ ನಡೆಸಿದರು. ಪಟ್ಟಣದ ತುಂಬೆಲ್ಲಾ ಬಾಳೆಗಿಡಗಳು, ಹೂವು, ಹಣತೆಗಳ ಸಾಲು ಸಾಲು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಯಿತು. ಕೊರೋನಾ ದಿಂದ ಈಗ್ಗೆ ಎಂಟತ್ತು ತಿಂಗಳು ಯಾವುದೇ ಹಬ್ಬವನ್ನು ಸಂಭ್ರಮದಿಂದ ಮಾಡಿರದ ಜನತೆ ಈ ಬಾರಿ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಸಂತಸದಿಂದಲೇ ಹಬ್ಬ ಆಚರಿಸುವುದು ಕಂಡು ಬಂದಿತು.
ವ್ಯಾಪಾರಿಗಳು, ಅಂಗಡಿ ಮುಗ್ಗಟ್ಟುಗಳ ಮಾಲೀಕರು ತಮ್ಮ ಅಂಗಡಿಗಳನ್ನು ಶೃಂಗರಿಸಿ ಶನಿವಾರ ಸಂಜೆ ಲಕ್ಷ್ಮಯನ್ನು ಕೂರಿಸಿ ತಮ್ಮ ಸಂಬಂಧಿಕರು, ಸ್ನೇಹಿತರ ಜೊತೆ ಸಿಹಿಭೋಜನ ಸವಿದು ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.