ಕೂಡ್ಲಿಗಿ ಸ್ವಚ್ಛನಗರವಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ – ತಳಾಸ್ ವೆಂಕಟೇಶ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 21 :-  ಸ್ವಚ್ಛನಗರವಾಗಿಸಲು ಪಟ್ಟಣದ ಪ್ರತಿಯೊಬ್ಬ ನಾಗರೀಕರ ಸಹಕಾರ ಅಗತ್ಯವಾಗಿದ್ದು ಸರ್ಕಾರದ ಆರ್ ಆರ್ ಆರ್ ಆಂದೋಲನಕ್ಕೆ ಸಹಕಾರ ನೀಡಿ ಘನತ್ಯಾಜ್ಯ ವಸ್ತುಗಳನ್ನು ಪಟ್ಟಣ ಪಂಚಾಯತಿ ಸ್ಥಾಪಿಸಿರುವ ಕೇಂದ್ರಕ್ಕೆ ತಂದು ಕೊಡುವ ಮೂಲಕ ನನ್ನ ಜೀವನ ನನ್ನ ಸ್ವಚ್ಛನಗರ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿಯ ಹಿರಿಯ ಸದಸ್ಯರಾದ ತಳಾಸ್ ವೆಂಕಟೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಚೋರುನೂರು ರಸ್ತೆಯಲ್ಲಿರುವ ಘನತ್ಯಾಜ್ಯ ವಸ್ತು ನಿರ್ವಹಣಾ ಕೆಂದ್ರದಲ್ಲಿ ಆರ್ ಆರ್ ಆರ್ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ಪಟ್ಟಣ ಪಂಚಾಯತಿ ನಾಗರೀಕರು ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಲು ಆರ್ ಆರ್ ಆರ್ ಆಂದೋಲನದಂತೆ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು, ತ್ಯಾಜ್ಯದ ಮರುಬಳಕೆ, ತ್ಯಾಜ್ಯದ ಮರು ಉಪಯೋಗದ ಸಾಮಗ್ರಿ ಸಂಗ್ರಹಿಸಲು ಪಟ್ಟಣ ಪಂಚಾಯತಿಯು ಸ್ಥಾಪಿಸಿರುವ ಕೇಂದ್ರಕ್ಕೆ ಲೇಖನ ಸಾಮಗ್ರಿಗಳು, ಬಟ್ಟೆ ಚೀಲಗಳು, ಎಲೆಕ್ಟ್ರಿಕಲ್ ವಸ್ತುಗಳನ್ನು ನೀಡಿ ಪಟ್ಟಣ ಪಂಚಾಯತಿಯ ನೊಂದಣಿ ಪುಸ್ತಕದಲ್ಲಿ ಹೆಸರು ವಿಳಾಸ ನೋಂದಾಯಿಸಿಕೊಳ್ಳಬೇಕು ಹಾಗೂ ಡಿಜಿಟಲ್ ಪ್ರಮಾಣ ಪತ್ರ ಪಡೆದುಕೊಳ್ಳುವಂತೆ ನಾಗರೀಕರಲ್ಲಿ ಮನವಿ ಮಾಡಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ ಚೋರುನೂರು ರಸ್ತೆಯ ಘನತ್ಯಾಜ್ಯ ವಸ್ತು ನಿರ್ವಹಣಾ ಕೆಂದ್ರದ ಜಾಗದಲ್ಲಿ ಮೇ 20ರಿಂದ ಜೂನ್ 5ರ ವರೆಗೆ ಜರುಗುವ ನನ್ನ ಜೀವನ ನನ್ನ ಸ್ವಚ್ಛ ನಗರ ಆಂದೋಲನ ಕಾರ್ಯಕ್ರಮದ ಅಂಗವಾಗಿ ನೀವು ಬಳಕೆ ಮಾಡಿದ ಪ್ಲಾಸ್ಟಿಕ್ ಬಳಕೆ ವಸ್ತುಗಳು, ಹಳೇ ಬಟ್ಟೆ, ಜೀನ್ಸ್ ಬಟ್ಟೆಗಳು, ರದ್ದಿ ಪೇಪರ್ ಗಳು ಸೇರಿದಂತೆ ಇತರೆ ಎಲೆಕ್ಟ್ರಿಕಲ್ ವಸ್ತುಗಳನ್ನು ಕೇಂದ್ರಕ್ಕೆ ತಂದುಕೊಟ್ಟು ಅಲ್ಲಿರುವ ನೊಂದಣಿ ಪುಸ್ತಕದಲ್ಲಿ ಹೆಸರು ವಿಳಾಸ ನೋಂದಾಯಿಸಿ ಸೆಲ್ಫಿ ಪಡೆದುಕೊಂಡು ಸಹಿ ಸಂಗ್ರಹ ಮಾಡುವ ಮೂಲಕ ಈ ಆಂದೋಲನದ ಉಪಯೋಗ ಪಡೆದುಕೊಳ್ಳುವಂತೆ ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ನಾಗರೀಕರಲ್ಲಿ ಮುಖ್ಯಾಧಿಕಾರಿ ಕೋರಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಸಚಿನಕುಮಾರ, ಪಟ್ಟಣ ಪಂಚಾಯತಿ ಆರೋಗ್ಯ ಸಹಾಯಕ ನಿರೀಕ್ಷಕಿ ಗೀತಾವಿಜೇತ್, ಹಾಗೂ ಪೌರ ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.