ಕೂಡ್ಲಿಗಿ : ಸಿಡಿಲಿಗೆ ಜಾನುವಾರುಗಳ ಬಲಿ. ಮಳೆಗಾಳಿಗೆ ಹಾರಿಹೋದ ಮೇಲ್ಚಾವಣಿ ಶೀಟ್ ಗಳು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 30:- ಸಿಡಿಲಿನ ಅಬ್ಬರಕ್ಕೆ ತಾಲೂಕಿನ ಸಕಲಾಪುರಹಟ್ಟಿ ಹಾಗೂ ಅರ್ಜುನ ಚಿನ್ನೇನಹಳ್ಳಿಲಿ ಎರಡು ಎತ್ತು, ಒಂದು ಆಕಳು ಹಾಗೂ ಐದು ಕುರಿ ಎರಡು ಟಗರು ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ 4ಗಂಟೆ ಸುಮಾರಿಗೆ ಜರುಗಿದ್ದು ಅದೇ ರೀತಿ ಮಳೆಗಾಳಿಗೆ ಕಾನಹೊಸಹಳ್ಳಿ ಕುಲುಮೆಹಟ್ಟಿಯ ನಾಲ್ಕೈದು ಕುಟುಂಬದ ಮನೆಗಳ ಮೇಲ್ಚಾವಣಿ ಶೀಟ್ ಗಳು ಹಾರಿಹೋಗಿವೆ ಎಂದು ತಿಳಿದಿದೆ.
ಹೊಸಹಳ್ಳಿ ಹೋಬಳಿಯ ಸಕಲಾಪುರಹಟ್ಟಿಯ ಗೌಡಜ್ಜರ ತಿಪ್ಪಣ್ಣ ಎಂಬುವರಿಗೆ ಸೇರಿದ ಐದು ಕುರಿಗಳು ಎರಡು ಟಗರು ಆಳೂರು ಆಂಜನೇಯ ದೇವಸ್ಥಾನ ಹತ್ತಿರ  ಮೆಯುತ್ತಿದ್ದಾಗ ನಿನ್ನೆ ಸಂಜೆ 4ಗಂಟೆ ಸುಮಾರಿಗೆ ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಮೃತಪಟ್ಟಿವೆ. ಅಲ್ಲದೆ ಕಾನಹೊಸಹಳ್ಳಿಯ ಕುಲುಮೆಹಟ್ಟಿಯ ಕಾಳಮ್ಮ, ಶೇಖನ್ ಬೀ, ಶಿವನಾಗಮ್ಮ, ಮಾರಕ್ಕ ಹಾಗೂ ಕೆ ಎನ್ ಸುಜಾತ ಅವರುಗಳ ಮನೆಗಳ ಮೇಲ್ಚಾವಣಿ ಶೀಟ್ ಗಳು ಮಳೆಗಾಳಿ ರಭಸಕ್ಕೆ ಹಾರಿಹೋಗಿದ್ದು ರಾತ್ರಿ ಪೂರಾ ಮೇಲ್ಚಾವಣಿ ಇಲ್ಲದ ಮನೆಯಲ್ಲೇ ಕುಟುಂಬಗಳು ಜೀವನ ಸಾಗಿಸಿವೆ ಘಟನಾ ಸ್ಥಳಗಳಿಗೆ  ಹೊಸಹಳ್ಳಿ ಹೋಬಳಿ  ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ಹಾಗೂ ಗ್ರಾಮಲೆಕ್ಕಾಧಿಕಾರಿ ಚನ್ನಯ್ಯ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅದೇ ರೀತಿಯಾಗಿ ಸಕಲಾಪುರಹಟ್ಟಿ ಗ್ರಾಮದಿಂದ  ಸುಮಾರು 15ಕಿಮೀ ದೂರದಲ್ಲೇ ಇರುವ ಗುಡೇಕೋಟೆ ಹೋಬಳಿಯ ಅರ್ಜುನ ಚಿನ್ನೇನಹಳ್ಳಿ ಗ್ರಾಮದ ಹೊರವಲಯದ ಹೊಲದಲ್ಲಿದ್ದ ಸುರೇಶ ಎಂಬುವರಿಗೆ ಸೇರಿದ ಎರಡು ಎತ್ತುಗಳು ಹಾಗೂ ಒಂದು ಆಕಳು  ನಿನ್ನೆ ಸಂಜೆ  4-10ಗಂಟೆಗೆ ಹೊಡೆದ ಸಿಡಿಲಿನ ಅಬ್ಬರಕ್ಕೆ ಬಲಿಯಾಗಿವೆ ಘಟನಾ ಸ್ಥಳಕ್ಕೆ ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡ್ಲಿಗಿ ತಹಸೀಲ್ದಾರ್ ಗೆ ವರದಿ ಸಲ್ಲಿಸಿದ್ದಾರೆ.