ಕೂಡ್ಲಿಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರು

ಕೂಡ್ಲಿಗಿ.ಏ.8:- ಆರನೇ ವೇತನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರ ಖಾಸಗಿ ವಾಹನಗಳಿಗೆ ನಿಲ್ದಾಣದೊಳಗೆ ಪ್ರವೇಶ ನೀಡಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲುವ ಪ್ಲಾಟ್ ಫಾರ್ಮ್ ನಲ್ಲಿ ಖಾಸಗಿ ವಾಹನಗಳು ನಿಲ್ಲಿಸಿ ತಮ್ಮ ದರ್ಬಾರು ಮೆರೆಸುತ್ತಿರುವ ಘಟನೆ ಕಂಡುಬಂದಿತು. ಇಂದು ಬೆಳಿಗ್ಗೆ ಸಾರಿಗೆ ಸಂಸ್ಥೆಯ ಹೊಸಪೇಟೆ ವಿಭಾಗೀಯ ಸಂಚಾರಿ ಅಧಿಕಾರಿ ಬಸವರಾಜ ಘಟಕದಲ್ಲಿ ಮೊಕ್ಕಾಂ ಹೂಡಿ ಸಿಬ್ಬಂದಿ ಕಳುಹಿಸಿ ಒತ್ತಾಯ ಪೂರ್ವಕವಾಗಿ ಕೆಲ ಚಾಲಕ -ನಿರ್ವಾಹಕರನ್ನು ಕರೆ ತಂದು ಕೂಡ್ಲಿಗಿ ಘಟಕದಿಂದ ಐದು ಬಸ್ಸುಗಳನ್ನು ಹೊಸಪೇಟೆ ಮತ್ತು ಹರಪನಹಳ್ಳಿ ಮಾರ್ಗದ ಕಡೆ ಕಳುಹಿಸಲಾಗಿದೆ ಸಂಡೂರು ಮತ್ತು ಹೊಸಪೇಟೆಗೆ ಎರಡು ಟ್ರಾಕ್ಸ್ ಮತ್ತು ಒಂದು ಟಿ ಟಿ ವಾಹನ ಕಳುಹಿಸಲಾಗಿದೆ ಎಂದು ತಿಳಿದಿದೆ ಅಲ್ಲದೆ ಜನರು ಸಹ ಮುಷ್ಕರ ಹಿನ್ನೆಲೆ ಅರಿತು ನಿಲ್ದಾಣದತ್ತ ಸುಳಿಯದೆ ಇದ್ದು ಸಾರಿಗೆ ನಿಲ್ದಾಣ ಬಿಕೋ ಎನ್ನುತ್ತಿದೆ ಇರುವ ಒಬ್ಬರು ಇಬ್ಬರನ್ನೇ ಕರೆದುಕೊಂಡು ಹೋಗುವಲ್ಲಿ ವಾಹನಗಳು ಮುಂದಾಗಿವೆ ಚಿತ್ರದುರ್ಗ, ಬಳ್ಳಾರಿ ಇತರೆಡೆ ಬಸ್ಸುಗಳು ಹೋಗದೆ ಅತ್ತ ಸಾಗುವ ಪ್ರಯಾಣಿಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ನಾಕೊಡೇ , ನೀಬಿಡೇ : ಸಾರಿಗೆ ಸಂಸ್ಥೆ ನೌಕರರು ಆರನೇ ವೇತನ ಮಂಜೂರು ಮಾಡಿ ಎಂದು ಸರ್ಕಾರಕ್ಕೆ ಬೇಡಿಕೆ ಇಟ್ಟು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿದ್ದು ಆರನೇ ವೇತನ ನೀಡಲು ಒಪ್ಪದ ಸರ್ಕಾರ ಮುಷ್ಕರ ಹತ್ತಿಕ್ಕಲು ಖಾಸಗಿ ವಾಹನಗಳಿಗೆ ಪರವಾನಿಗೆ ನೀಡುವುದು ಕರ್ತವ್ಯಕ್ಕೆ ನೌಕರರು ಬರದಿದ್ದರೆ ಎಸ್ಮಾ ಜಾರಿ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ನೌಕರರ ಕುಟುಂಬಗಳು ವಿಡಿಯೋ ಮಾಡಿ ನೌಕರರ ಕುಟುಂಬ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿವೆ. ಮುಷ್ಕರ ನಿರತರು ಆರನೇ ವೇತನ ಮಂಜೂರು ಮಾಡುವ ತನಕ ಮುಷ್ಕರ ಬಿಡೆವು ಎಂದು ಹೇಳುತ್ತಿದ್ದಾರೆ ಇತ್ತ ಸರ್ಕಾರ ಮುಷ್ಕರ ನಿರತರ ಬೇಡಿಕೆಗೆ ಕಿವಿಗೊಡದೆ ಬೇರೆ ಬೇರೆ ಅಸ್ತ್ರ ಬಳಸಿಕೊಂಡು ಮುಷ್ಕರ ಹತ್ತಿಕ್ಕುವ ಪ್ರಯತ್ನ ಮಾಡುತ್ತ ಆರನೇ ವೇತನ ನಾ ಕೊಡೆ ಎಂಬ ನಿರ್ಧಾರ ಸರ್ಕಾರದ್ದಾಗಿದೆ ಎಂದು ಹೇಳಬಹುದಾಗಿದೆ.