ಕೂಡ್ಲಿಗಿ : ವಿದೇಶದಿಂದ ಬಂದ ಹರ್ಷಿತ್ ಮತದಾನ


ಸಂಜೆವಾಣಿ ವಾರ್ತೆ
 ಕೂಡ್ಲಿಗಿ. ಮೇ.8 :-  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  ನೆದರ್‌ಲ್ಯಾಂಡ್‌ನಲ್ಲಿ ಎಂಜಿನಿಯರ್ ಆಗಿರುವ ಕೂಡ್ಲಿಗಿ ಪಟ್ಟಣದ ನಿವಾಸಿ ಡಿ .ಹರ್ಷಿತ್ ಎನ್ನುವವರು ಹಣಕ್ಕಿಂತ ದೇಶ ಮುಖ್ಯ ಎಂದು 2ಲಕ್ಷ ರೂ ವ್ಯಯ ಮಾಡಿ  ವಿದೇಶದಿಂದ  ಆಗಮಿಸಿ ಪಟ್ಟಣದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 38ರಲ್ಲಿ ಮಂಗಳವಾರ ತಮ್ಮ  ಸಂವಿಧಾನಿಕ  ಮತದಾನದ ಹಕ್ಕು ಚಲಾಯಿಸಿದರು.
ಕೂಡ್ಲಿಗಿ ನಿವಾಸಿ  ಶಿಕ್ಷಕ ವಿ. ದುಗ್ಗಪ್ಪ ಮತ್ತು ಪೂರ್ಣಿಮಾ ದಂಪತಿ ಪುತ್ರ ಡಿ .ಹರ್ಷಿತ್ ಅವರು ಕೆಲ ವರ್ಷದಿಂದ ವಿದೇಶದ ನೆದರ್ ಲ್ಯಾoಡ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯ  ನಿರ್ವಹಿಸುತ್ತಿದ್ದು ಯಾವುದೇ ದೇಶದಲ್ಲಿದ್ದರು ನಮ್ಮ ದೇಶ ನಮ್ಮ ಹಕ್ಕು ನನ್ನ ಮತ ಎನ್ನುವ ನಿಟ್ಟಿನಲ್ಲಿ ನಿನ್ನೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಹಾಗೂ ನನ್ನ  ಮತ ಚಲಾಯಿಸಬೇಕೆಂಬ ಉದ್ದೇಶದಿಂದ 2 ಲಕ್ಷ ರೂ.ವೆಚ್ಚ  ಮಾಡಿ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಮತಗಟ್ಟೆ ಸಂಖ್ಯೆ 38ರಲ್ಲಿ ಆಗಮಿಸಿ ಮತ ಚಲಾಯಿಸಿದರು.ಅಲ್ಲದೆ  ಈ ಹಿಂದೆಯೂ ಸಹ  2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಸಹ ಇವರು ಇದೇ ರೀತಿ  ಮತದಾನ ಮಾಡಿದ್ದಾರೆ.
ಮತ ಚಲಾಯಿಸಿ ಡಿ ಹರ್ಷಿತ್  ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿ ಕೆಲ ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತವಿದ್ದು, ನಮ್ಮ ದೇಶದ ಪ್ರಜಾಪ್ರಭುತ್ವದಿಂದ ಸಾಮಾನ್ಯ ಪ್ರಜೆಗೂ ಬೆಲೆ ಇದೆ. ಇಂತಹ  ದೇಶದಲ್ಲಿ ಪ್ರಜಾತಂತ್ರವನ್ನು ಎತ್ತಿ ಹಿಡಿಯಲು ಹಾಗೂ ಪ್ರಗತಿ ಕಾಣಲು ಪ್ರತಿಯೊಬ್ಬರೂ ಸಂವಿಧಾನಬದ್ಧ ಹಕ್ಕು ಚಲಾಯಿಸಿದಾಗ ಮಾತ್ರ ಸಾಧ್ಯ. ಅಕ್ಷರಸ್ಥರೇ ಹೆಚ್ಚಾಗಿ ಇರುವಂತಹ  ಬೆಂಗಳೂರು ಸೇರಿ ನಾನಾ ನಗರ, ಪಟ್ಟಣಗಳಲ್ಲಿ ಜನರು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಬೇಸರದ ಸಂಗತಿ. ಹಾಗಾಗಿ, ನನ್ನ ದೇಶದಲ್ಲಿ ಮತ ಹಾಕುವುದು ನನ್ನ ಹಕ್ಕು ಎಂದು ನಾನು ನಿರ್ಧರಿಸಿ ನೆದರ್‌ಲ್ಯಾಂಡ್‌ನಿoದ ಪಟ್ಟಣಕ್ಕೆ ಆಗಮಿಸಿ ನನ್ನ ಮತದಾನದ  ಹಕ್ಕು ಚಲಾಯಿಸಿದ ಹೆಮ್ಮೆಯಿದೆ ಎಂದು ಹರ್ಷಿತ್ ತಮ್ಮ ದೇಶಾಭಿಮಾನದ ಮಾತಿನಲ್ಲಿ ಹರ್ಷಿತರಾದರು.