
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.4 :- ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಶಾಲಾಕಾಲೇಜು ಆಸ್ತಿ ಸಂರಕ್ಷಣಾ ಅಭಿಯಾನವನ್ನು ನಿರ್ಲಕ್ಷ್ಯಸಿ ಮಹಾದೇವ ಮೈಲಾರ ಕ್ರೀಡಾಂಗಣದ 77ವರ್ಷಗಳ ಸ್ವಾಧೀನಾನುಭವದ ವಸ್ತು ನಿಷ್ಠ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಅಲ್ಲದೆ ಮೈದಾನ ಕಬಳಿಸಲು ಮುಂದಾಗಿರುವವರ ವಿರುದ್ಧ ಪ್ರತಿಭಟನೆ ಮತ್ತು ಜನಾಭಿಪ್ರಾಯ ಸಂಗ್ರಹಣಾ ಅಭಿಯಾನ ನಿನ್ನೆಯಿಂದ ಆರಂಭವಾಗಿ ಅನಿರ್ಧಿಷ್ಟ ನಿರಶನಕ್ಕೆ ಮೈದಾನ ಹೋರಾಟ ಸಮಿತಿ ಮುಂದಾಗಿದೆ.
ಪಟ್ಟಣ ಮೈಲಾರ ಮಹದೇವ ಕ್ರೀಡಾಂಗಣವು ಈ ಹಿಂದೆ 1945ರಲ್ಲಿ ಬೋರ್ಡ್ ಹೈಸ್ಕೂಲ್ ಆಟದ ಮೈದಾನವಾಗಿದ್ದು, ಕಳೆದ 23 ವರ್ಷಳಿಂದ ಇರುವ ಸಮಸ್ಯೆ ಬಗೆಹರಿಸಿ ಶಾಲಾ ವಿದ್ಯಾರ್ಥಿಗಳು ಮತ್ತು ನಾಗರಿಕರ ಹಿತದೃಷ್ಟಿಯಿಂದ ಉಳಿಸಿಕೊಡುವಂತೆ ಒತ್ತಾಯಿಸಿ ಹೋರಾಟಗಾರರು, ನಾನಾ ಸಂಘ, ಸಂಸ್ಥೆಯವರು ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ಅನಿರ್ದಿಷ್ಟಾವಧಿ ನಿರಶನವನ್ನು ನಿನ್ನೆ ಬೆಳಿಗ್ಗೆಯಿಂದ ಆರಂಭಿಸಿದರು.
ಕಳೆದ 75ವರ್ಷಗಳಿಂದಲೂ ಶಾಲಾ, ಕಾಲೇಜಿನ ಸ್ವಾಧೀನದಲ್ಲಿರುವ ಆಟದ ಮೈದಾನಕ್ಕೆ ಕೆಲವರು ಅಡ್ಡಿ ಪಡಿಸುತ್ತಿದ್ದು, ಈ ಬಗ್ಗೆ ಸರಕಾರ ಕೂಲಂಕುಷ ತನಿಖೆ ನಡೆಸಲಿ. ಈ ಆಟದ ಮೈದಾನವು ಶಾಲಾ, ಕಾಲೇಜಿನ ಸ್ವಾಧೀನದಲ್ಲಿತ್ತು ಎನ್ನುವುದಕ್ಕೆ ನಾನಾ ಸರಕಾರಿ ದಾಖಲೆಗಳಿವೆ. ಅಲ್ಲದೆ, ಇತ್ತೀಚೆಗೆ ಸರಕಾರ ಸಹ ಶಾಲಾ, ಕಾಲೇಜುಗಳ ಸ್ವಾಧೀನದಲ್ಲಿರುವ ಆಸ್ತಿಗಳನ್ನು ಶಾಲಾ, ಕಾಲೇಜುಗಳ ಹೆಸರಿಗೆ ಖಾತೆ ಮಾಡಿಸುವಂತೆ ಆದೇಶವಿದ್ದರೂ ಯಾವುದೂ ಪಾಲನೆಯಾಗುತ್ತಿಲ್ಲ. ಹೀಗಾಗಿ, ಈ ಸಮಸ್ಯೆ ಬಗೆಹರಿಯುವವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ನಿರಶನ ನಿರತ ಹೋರಾಟಗಾರರು ತಿಳಿಸಿದರು.
ಈ ಸಂದರ್ಭದಲ್ಲಿ ಆಟದ ಮೈದಾನ ಹೋರಾಟ ಸಮಿತಿಯ ಎ.ಎಂ.ರಾಘವೆಂದ್ರ, ವಾಲಿಬಾಲ್ ವೆಂಕಟೇಶ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ ಮೇಷ್ಟು ಜೆಸಿಐ ಕೂಡ್ಲಿಗಿ ಗೋಲ್ಡನ್ ಮಾಜಿ ಅಧ್ಯಕ್ಷ ಸಂದೀಪ್ ರಾಯ್ಸಮ್ , ಮಾಳ್ಗಿ ಗುರುರಾಜ ಸೇರಿ ಇತರರಿದ್ದರು. ಜೆಸಿಐ ಕೂಡ್ಲಿಗಿ ಗೋಲ್ಡನ್, ಮೈದಾನ ಗೆಳೆಯರ ಬಳಗ, ವಾಲಿಬಾಲ್ ತಾಲೂಕು ಅಸೋಸಿಯೇಷನ್ ಸೇರಿ ನಾನಾ ಸಂಘಟನೆಗಳು, ಪಟ್ಟಣದ ನಾಗರಿಕರು ನಿರಶನಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಹೋರಾಟಗಾರರಾದ ರಾಘವೇಂದ್ರ ಮತ್ತು ವೆಂಕಟೇಶ್ ತಿಳಿಸಿದರು.