ಸಂಜೆವಾಣಿ ವಾರ್ತೆ
ಕೂಡ್ಲಿಗಿ:ಏ. 27 :- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕಾನಹೊಸಹಳ್ಳಿ ಉನ್ನತೀಕರಿಸಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ 6 ಮತಕೇಂದ್ರಗಳ ಸ್ಥಿತಿಗತಿಯನ್ನು ಕ್ಷೇತ್ರದ ಚುನಾವಣಾ ವೀಕ್ಷಕ ತಮಿಳುನಾಡಿನ ಐಎಎಸ್ ಅಧಿಕಾರಿ ಶಿವಜ್ಞಾನಮ್ ಬುಧವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಿವಜ್ಞಾನಮ್ ಮಾತನಾಡಿ, ವಿಧಾನಸಭಾ ಚುನಾವಣೆಗಾಗಿ ಮೇ 10ರಂದು ನಡೆಯುವ ಮತದಾನಕ್ಕಾಗಿ ಮತಕೇಂದ್ರಗಳ ಸುಸ್ಥಿತಿ ಕಾಪಾಡಬೇಕಿದೆ. ಆ ನಿಟ್ಟಿನಲ್ಲಿ ಮತಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ, ಫ್ಯಾನ್, ಕುಡಿವ ನೀರು, ಶೌಚಾಲಯ ಸೇರಿ ಮೂಲಸೌಕರ್ಯಗಳಿರುವ ಕುರಿತು ಖಾತ್ರಿ ಪಡಿಸಿಕೊಳ್ಳಲು ಭೇಟಿ ನೀಡುತ್ತಿದ್ದು, ಒಂದೇ ಶಾಲಾ ಆವರಣದಲ್ಲಿ 6 ಕೇಂದ್ರಗಳಿರುವುದರಿಂದ ಹೆಚ್ಚಿನ ನಿಗಾವಹಿಸಿ, ಮತದಾರರಿಗೆ ನೀರು, ನೆರಳಿನ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಸಿಎಂ ವಿಜಯನಗರ ಜಿಲ್ಲಾ ಅಧಿಕಾರಿ ರಾಮಚಂದ್ರಪ್ಪ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ವೈ.ರವಿಕುಮಾರ್, ಕಾನಹೊಸಹಳ್ಳಿ ಗ್ರಾಪಂ ಪಿಡಿಒ ಬಸಮ್ಮ, ಬಿಎಲ್‌ಒಗಳಾದ ಮಂಗಳಗೌರಿ, ಎನ್.ಎಸ್.ಲೋಕೇಶ್, ಕೋಡಿಹಳ್ಳಿ ಸುರೇಶ್, ನಾಗಭೂಷಣ, ಗ್ರಾಮಲೆಕ್ಕಿಗ ಚನ್ನಬಸಯ್ಯ, ಗ್ರಾಪಂ ಬಿಲ್ ಕಲೆಕ್ಟರ್ ಶಶಿಕುಮಾರ್ ಸೇರಿ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು. ಇದಲ್ಲದೆ, ತಾಲೂಕಿನ ಕಾನಹೊಸಹಳ್ಳಿ ಎಸ್.ಕೆ.ಡಿ.ಡಿ.ವಿ ಪ್ರೌಢಶಾಲೆಯ ಮತಗಟ್ಟೆ ಸೇರಿ ಎಂ.ಬಿ.ಅಯ್ಯನಹಳ್ಳಿ, ಹಾರಕಬಾವಿ ಗ್ರಾಮದಲ್ಲಿನ ಮತಕೇಂದ್ರಗಳನ್ನು ಪರಿಶೀಲಿಸಿದರು.