ಕೂಡ್ಲಿಗಿ.ಪ. ಪಂ :ಬಿಜೆಪಿ ಗದ್ದುಗೆ ಪಕ್ಕಾ ಜೆಡಿಎಸ್, ಪಕ್ಷೇತರರ ಬೆಂಬಲ-ಬಿಜೆಪಿಗೆ ಅಧಿಕಾರ

ಕೂಡ್ಲಿಗಿ.ಅ.29:- ಪಟ್ಟಣ ಪಂಚಾಯತಿಗೆ ನವೆಂಬರ್ 2ರಂದು ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಜೆಡಿಎಸ್, ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.
ಸರ್ಕಾರ ಹೊರಡಿಸಿದ ಆದೇಶದಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಎಸ್ಸಿ ಮಹಿಳೆಯರು ಇದ್ದು ಒಬ್ಬರು ಬಿಜೆಪಿ ಸದಸ್ಯರಿದ್ದು ಇನ್ನೊಬ್ಬರು ಪಕ್ಷೇತರ ಸದಸ್ಯರಿದ್ದಾರೆ ಅದರಲ್ಲಿ ಬಿಜೆಪಿಯ 2ನೇ ವಾರ್ಡಿನ ಸದಸ್ಯೆ ಎಂ ಶಾರದಾಬಾಯಿ ಅಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಯಾಗುವುದು ಪಕ್ಕಾ ಎಂದು ಹೇಳಲಾಗಿದೆ.ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಸದಸ್ಯೆಯರಿದ್ದು ಅದರಲ್ಲಿ ಬಿಜೆಪಿಯ 15ನೇ ವಾರ್ಡಿನ ಸದಸ್ಯೆ ಊರಮ್ಮರಿಗೆ ಕೊಡಬೇಕೆಂದು ಈಗಾಗಲೇ ಶಾಸಕರು, ಸದಸ್ಯರು ಪಕ್ಷದ ಮುಖಂಡರು ಚರ್ಚೆ ನಡೆಸಿ ತೀರ್ಮಾನಿಸಿದ್ದರೆಂದು ಉಪಾಧ್ಯಕ್ಷ ಸ್ಥಾನ ಊರಮ್ಮರಿಗೆ ಬಹುತೇಕ ಪಕ್ಕಾ ಎಂದು ಹೇಳಬಹುದಾಗಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿ 20ಸದಸ್ಯರನ್ನು ಒಳಗೊಂಡಿದ್ದು ಅದರಲ್ಲಿ 1ನೇ ವಾರ್ಡಿನ ಪಕ್ಷೇತರ ಸದಸ್ಯ ಬಿ.ಎಂ.ತ್ರಿಮೂರ್ತಿ ಮತ್ತು 12ನೇ ವಾರ್ಡಿನ ಬಿಜೆಪಿ ಸದಸ್ಯೆ ಬಿ.ಕೆ.ಜಯಮ್ಮ ಎಂಬ ಇಬ್ಬರು ಇತ್ತೀಚಿನ ಕೋವಿಡ್ ಮಹಾಮಾರಿಗೆ ಅಧಿಕಾರ ಗದ್ದುಗೆ ಏರುವ ಮೊದಲೇ ಬಲಿಯಾಗಿದ್ದರಿಂದ ಈಗ 18ಸದಸ್ಯರಿದ್ದು ಬಿಜೆಪಿಯ 6, ಕಾಂಗ್ರೆಸ್ಸನ 6, ಜೆಡಿಎಸ್ ನ 4 ಮತ್ತು ಪಕ್ಷೇತರ 2ಸದಸ್ಯರು ಇದ್ದಾರೆ.
ಬಿಜೆಪಿ ಪಕ್ಷಕ್ಕೆ ಜೆಡಿಎಸ್, ಪಕ್ಷೇತರರ ಬೆಂಬಲದಿಂದ 12ಸದಸ್ಯರ ಬಲವಾಗುತ್ತಿದ್ದು ಪಟ್ಟಣ ಪಂಚಾಯತಿ ಅಧಿಕಾರ ಬಿಜೆಪಿಗೆ ಪಕ್ಕಾ ಎಂದು ಹೇಳಲಾಗಿದೆ. ಕಾಂಗ್ರೆಸ್ 6 ಸದಸ್ಯರಿದ್ದು ಅದರಲ್ಲಿ 4ಮಹಿಳೆಯರಿದ್ದಾರೆ ಪಕ್ಷಕ್ಕೆ ಅಧಿಕಾರ ಪಡೆಯಲು ಕೋರಂ ಬೆಂಬಲ ಇಲ್ಲದಿದ್ದರೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬ ಪಕ್ಷದ ತೀರ್ಮಾನದ ನಂತರ ತಿಳಿಯಲಿದೆ. ಒಳಒಪ್ಪಂದ :ಈಗಾಗಲೇ ಜೆಡಿಎಸ್, ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದು ಬಿಜೆಪಿ ಪಕ್ಷದ ಶಾಸಕರು, ಮುಖಂಡರು, ಸದಸ್ಯರು ಚರ್ಚಿಸಿ ತೀರ್ಮಾನಿಸಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ ಹಂತದಲ್ಲಿ ಇಬ್ಬರು ಇಷ್ಟಿಷ್ಟು ತಿಂಗಳ ಅಧಿಕಾರ ನಡೆಸುವಂತೆ ತೀರ್ಮಾನಿಸಲಾಗಿದ್ದು 15ನೇ ವಾರ್ಡಿನ ಬಿಜೆಪಿ ಸದಸ್ಯೆ ಊರಮ್ಮ ಮೊದಲು ಸ್ಥಾನ ಅಲಂಕರಿಸಿ ನಂತರವಾಗಿ 14ನೇ ವಾರ್ಡಿನ ಬಿಜೆಪಿ ಸದಸ್ಯೆ ರೇಣುಕಾಶ್ರಿ ದುರುಗೇಶ್ ಗೆ ಬಿಟ್ಟುಕೊಡಬೇಕೆಂಬ ಒಳಒಪ್ಪಂದವಾಗಿದೆ ಎಂದು ತಿಳಿದಿದೆ. ಜೆಡಿಎಸ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಮುಂದಾಗಿದ್ದು ಅದರಲ್ಲಿ ಹಿರಿಯ 6ನೇ ವಾರ್ಡಿನ ಜೆಡಿಎಸ್ ಸದಸ್ಯ ತಳಸದ ವೆಂಕಟೇಶಗೆ ಕೊಡುವ ಬಗ್ಗೆ ತೀರ್ಮಾನಿಸಲಾಗಿತ್ತಾದರೂ ವೆಂಕಟೇಶ್ ಅಭಿಪ್ರಾಯದಂತೆ ಮೊದಲು ಇಂತಿಷ್ಟು ತಿಂಗಳು 20ನೇ ವಾರ್ಡಿನ ಪಕ್ಷೇತರ ಸದಸ್ಯ ಬಾಸುನಾಯ್ಕ್ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲಿದ್ದಾರೆಂದು ಒಳಒಪ್ಪಂದ ಮಾಹಿತಿ ತಿಳಿದಿದೆ.