ಕೂಡ್ಲಿಗಿ ಪ.ಪಂ ಚುನಾವಣೆ ಶೇ 69.05 ಮತದಾನ

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ ಎರಡು ಸದಸ್ಯ ಸ್ಥಾನಕ್ಕೆ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಒಟ್ಟಾರೆ ಶೇ 69.05 ಮತದಾನವಾಗಿದೆ.

1ನೇ ವಾರ್ಡಿನಲ್ಲಿ 302 ಪುರುಷರು, 290 ಮಹಿಳೆಯರು ಸೇರಿ ಒಟ್ಟು 592(ಶೇ57.03) ಹಾಗೂ 12ನೇ ವಾರ್ಡಿನಲ್ಲಿ 455 ಪುರುಷರು, 537 ಮಹಿಳೆಯರು ಸೇರಿ ಒಟ್ಟು 992(ಶೇ78.98) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಬೆಳಿಗ್ಗೆ 7ಗಂಟೆಯಿಂದ ಆರಂಭಗೊಂಡ ಮತದಾನ ಬಿಸಿಲು ಏರಿದಂತೆ ನಿಧಾನವಾಗಿ ಮತದಾನದ ಕಾವೂ ಸಹ ಏರಿಕೆ ಕಂಡಿತು.
ಮಧ್ಯಾಹ್ನದ ಹೊತ್ತಿಗೆ 1ನೇ ವಾರ್ಡಿನಲ್ಲಿ ಶೇ 32.56 ಹಾಗೂ 12ನೇ ವಾರ್ಡಿನಲ್ಲಿ ಶೇ 46.02ರಷ್ಟು ಮತದಾನವಾಗಿತ್ತು.

ಬಿಸಿಲಿನ ತಾಪಕ್ಕೆ ಮಧ್ಯಾಹ್ನ ಮತದಾನದಲ್ಲಿ ಇಳಿಕೆ ಕಂಡರೆ, 3 ಗಂಟೆಯ ನಂತರ ಚುರುಕುಗೊಂಡು 5 ಗಂಟೆಯ ಹೊತ್ತಿಗೆ ಎರಡು ಮತಗಟ್ಟೆಗಳಲ್ಲಿ ಶೇ 69.05 ಮತದಾನವಾಯ್ತು.

ಮತಗಟ್ಟೆಯಲ್ಲಿ ಪರಸ್ಪರ ಹೊಂದಿಕೊಂಡು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಅಂತರ ಕಾಯ್ದುಕೊಂಡು ನಿಂತುಕೊಳ್ಳಲು ಪೊಲೀಸರು ಸೂಚನೆ ನೀಡಿದರು.

ಮತಯಾಚನೆ: ಬೆಳಿಗ್ಗೆಯಿಂದಲೇ ತಮ್ಮ ಅಭ್ಯಾರ್ಥಿಗಳ ಪರವಾಗಿ ಕಾರ್ಯಕರ್ತರು ಮತದಾರರನ್ನು ಮತಗಟ್ಟೆಗೆ ಕರೆ ತರುತ್ತಿದ್ದರೆ, ಇಲ್ಲಿಗೆ ಬಂದ ಮತದಾರರನ್ನು ಸುತ್ತುವರಿದು ಕೊನೆ ಗಳಿಗೆಯಲ್ಲಿ ಮತಯಾಚನೆ ಮಾಡುವ ದೃಶ್ಯ ಎರಡು ಮತಗಟ್ಟೆಗಳಲ್ಲಿ ಸಾಮಾನ್ಯವಾಗಿತ್ತು.

ಮತದಾರದನ್ನು ಸೆಳೆಯಲು ಮೂರು ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮತಗಟ್ಟೆಗಳ ಬಳಿ ಜಮಾಯಿಸಿದ್ದು ಕಂಡು ಬಂದಿತು.
ರಾತ್ರಿಯಿಡಿ:
12ನೇ ವಾರ್ಡಿನ ಮತಗಟ್ಟೆಯಲ್ಲಿ ವಾಮಾಚಾರ ಮಾಡುತ್ತಾರೆ ಎಂಬ ಶಂಕೆಯಿಂದ ಪರಸ್ಪರ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾನುವಾರ ರಾತ್ರಿಯಿಡಿ ಮತಕೇಂದ್ರದ ಬಳಿ ಕಾದುಕುಳಿತ್ತಿದ್ದರು. ಬೆಳಿಗ್ಗೆ ಮತದಾನ ಆರಂಭವಾಗುವ ವೇಳೆಗೆ ಪಕ್ಷವೊಂದರ ಕಾರ್ಯಕರ್ತರು ಬಂದು ಮತಗಟ್ಟೆಯಲ್ಲಿ ಪೂಜೆ ಸಲ್ಲಿಸಿಹೋಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದರಿಂದ ಮತ್ತೊಂದು ಪಕ್ಷದ ಕಾರ್ಯಕರ್ತರು ಬಂದು ಮತಗಟ್ಟೆಯಲ್ಲಿ ಗೋಮುತ್ರ ಸಿಂಪಡಿಸಿ ಶುದ್ದಿ ಮಾಡಿದ ಘಟನೆಯೂ ಜರುಗಿತು.

ಇತ್ತ 1ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಪೂಜೆ ಮಾಡಲು ಬಂದಿದ್ದನ್ನು ಕಂಡ ಸಿಬ್ಬಂದಿ ಅವರನ್ನು ಹೊರ ಕಳಿಸಿದ್ದರು.